ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ಹಿಂದಿನ ಹಿರಿಯರು ಹಬ್ಬ-ಹರಿದಿನಗಳನ್ನು ಸುಮ್ಮನೆ ಮಾಡಿಲ್ಲ. ಪ್ರತಿಯೊಂದು ಹಬ್ಬದಲ್ಲಿಯೂ ಒಂದು ಅರ್ಥವಿರುವಂತೆ ನೋಡಿಕೊಂಡಿದ್ದಾರೆ. ಅವುಗಳಲ್ಲಿ ದೀಪೋತ್ಸವವೂ ಒಂದು ವಿಶೇಷ ಹಬ್ಬವಾಗಿದೆ. ದೀಪೋತ್ಸವವು ಕಣ್ಣಿಗೆ ಹಬ್ಬವನ್ನುಂಟು ಮಾಡಿದರೆ, ಬೆಳಕು ಜ್ಞಾನವನ್ನು ನೀಡುತ್ತದೆ ಎಂದು ಡಯಟ್‌ನ ನಿವೃತ್ತ ಪ್ರಾಧ್ಯಾಪಕ ಕೆ.ಪಿ. ಸಾಲಿಮಠ ಹೇಳಿದರು.
ಪಟ್ಟಣದ ನವನಗರದಲ್ಲಿನ ಹಂಪಸಾಗರ ನವಲಿ ಹಿರೇಮಠದಲ್ಲಿ ಕಾರ್ತಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರಾಧ್ಯ ದೈವವನ್ನು ದೀಪಗಳ ಬೆಳಕಿನಲ್ಲಿ ನೋಡುವುದೇ ಒಂದು ಸೊಗಸು. ದೇವರನ್ನು ಬರಿಗಣ್ಣಿನಲ್ಲಿ ನೋಡುವುದಕ್ಕೂ, ದೀಪಗಳ ಬೆಳಕಿನಲ್ಲಿ ನೋಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ದೀಪಗಳ ಬೆಳಕಿನಲ್ಲಿ ಕಾಣುವ ಭಗವಂತನನ್ನು ಕಂಡರೆ ಅಲ್ಲಿನ ಆ ಕಳೆ ನಮ್ಮ ಮನಸ್ಸುಗಳನ್ನು ತುಂಬುತ್ತದೆ. ಚಳಿಯ ದಿನಗಳ ಈ ಸಮಯದಲ್ಲಿಯೇ ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಿಸುವಲ್ಲಿ ಒಂದು ವಿಶೇಷ ಅರ್ಥವಿದೆ ಎಂದರು.
ಈ ಸಂದರ್ಭದಲ್ಲಿ ಮಹಾದೇವಸ್ವಾಮಿ ನವಲಿ ಹಿರೇಮಠ, ಎಮ್.ಕೆ. ಬೇವಿನಕಟ್ಟಿ, ಜಗದೀಶ ಸಂಗನಾಳಮಠ, ವೀರನಗೌಡ ಹುಲ್ಲೂರ, ಎಸ್.ಜಿ. ಹಿರೇವಡೆಯರ, ಮಂಜುನಾಥ ಗ್ರಾಮಪುರೋಹಿತ, ಉಮೇಶ ಉಮಚಗಿ, ಮಂಜುನಾಥ ಮಲ್ಲನಗೌಡ್ರ, ಮುತ್ತಣ್ಣ ಹಡಪದ, ಗಂಗಾಧರ ಮಡಿವಾಳರ ಸೇರಿದಂತೆ ಶ್ರೀಮಠದ ಅನೇಕ ಸದ್ಭಕ್ತರು ಉಪಸ್ಥಿತರಿದ್ದರು.



