ಸಮರ್ಪಕ ನೀರು ಪೂರೈಕೆಗೆ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 2 ತಿಂಗಳಿಂದ ನದಿ ನೀರು ಪೂರೈಕೆಯಾಗಿಲ್ಲ ಎಂದು ಪಟ್ಟಣದ 14ನೇ ವಾರ್ಡ್‌ನ ನಿವಾಸಿಗಳು ಮಂಗಳವಾರ ಪುರಸಭೆಗೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

Advertisement

ಈ ವೇಳೆ ವಾರ್ಡಿನ ಸದಸ್ಯ ಮಹೇಶ ಹುಲಬಜಾರ್, ನಿವಾಸಿಗಳಾದ ಮಲ್ಲನಗೌಡ ಪಾಟೀಲ ಮಾತನಾಡಿ, 2 ತಿಂಗಳಿ ನದಿ ನೀರು ಬಿಟ್ಟಿಲ್ಲ. ಸವಳು ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸರಿಯಾಗಿ ನೀರು ಪೂರೈಕೆ ಮಾಡಬೇಕು ಎಂದು ವಾರದ ಹಿಂದೆ ವಾರ್ಡ್‌ನ ನಿವಾಸಿಗಳು ಪುರಸಭೆ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ವಾರ್ಡ್‌ನ ಜನತೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ಸಮಯಕ್ಕೆ ನೀರು ಬಿಡುವಂತೆ ನೋಡಿಕೊಳ್ಳಬೇಕು. ನೀರು ಪೂರೈಕೆ ಮಾಡುವ ಸಿಬ್ಬಂದಿಯೂ ಜನರೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದು, ಬೇರೆ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

‘ನಮ್ಮ ಓಣ್ಯಾಗ ಸರಿಯಾಗಿ ನೀರ ಬಿಡಂಗಿಲ್ಲ. ಬೇರೆ ಓಣ್ಯಾಗ 8/10 ದಿನಕೊಮ್ಮೆ ನೀರು ಬರ್ತಾವ. ಹಿಂಗಾಗಿ ನಾವು ನೀರಿಗೆ ಅಡ್ಡಾಡಬೇಕಾಗುತ್ತೆ’ ಎಂದು ನಿಂಗವ್ವ ಪಾಟೀಲ, ಸುಜಾತ ಬಿಂಕದಕಟ್ಟಿ ಅಳಲು ತೋಡಿಕೊಂಡರು.

ನೀರೆತ್ತುವ ಪಂಪ್‌ಹೌಸ್‌ನಲ್ಲಿನ ತಾಂತ್ರಿಕ ಸಮಸ್ಯೆಯ ಜತೆಗೆ ಮಾರ್ಗದಲ್ಲಿ ಪೈಪ್‌ಲೈನ್ ಒಡೆದಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ನಾಳೆ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಆರ್.ಎಸ್. ಹಡಗಲಿಮಠ, ಹೊಳಲಪ್ಪಗೌಡ ಪಾಟೀಲ, ಮಂಜುನಾಥ ಗಾಂಜಿ, ಸಂತೋಷ ಹೂಗಾರ, ಸೋಮನಗೌಡ ಪಾಟೀಲ, ಲೋಹಿತಗೌಡ ಪಾಟೀಲ, ಲಲಿತಾ ಈಶ್ವರಗೌಡ ಪಾಟೀಲ, ಬಸನಗೌಡ ಪಾಟೀಲ, ಮಲ್ಲವ್ವ ಪಾಟೀಲ, ಗಂಗಮ್ಮ ಫಕ್ಕೀರಸ್ವಾಮಿಮಠ, ಸಾವಕ್ಕ ಪಾಟೀಲ, ಪ್ರೇಮವ್ವ ಬಡಿಗೇರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here