ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಮೆಡಿಕಲ್ ಕಾಲೇಜಿಗೆ ದಿ ಕೆ.ಎಚ್. ಪಾಟೀಲ ಅವರ ಹೆಸರನ್ನು ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಗದಗ ಜಿಲ್ಲಾ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಈ ಭಾಗದ ನಡೆದಾಡುವ ದೇವರೆಂದೇ ಹೆಸರಾದ ಪಂ. ಪುಟ್ಟರಾಜ ಗವಾಯಿಗಳ ಹೆಸರನ್ನು ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವಂತೆ ಒತ್ತಾಯಿಸಲು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಲ್ಲಸಮುದ್ರ ಗ್ರಾಮದಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣವಾಗಲು ಆ ಗ್ರಾಮದ ಪಾಟೀಲ ಮನೆತನದವರ ಕೊಡುಗೆಯೇ ಕಾರಣ. ಬಹುದಿನಗಳ ಹಿಂದೆಯೇ ಆಸ್ಪತ್ರೆ ಉದ್ದೇಶಕ್ಕೆ ಮಾತ್ರ ಬಳಸುವ ಕರಾರಿನ ಮೇಲೆ 54 ಎಕರೆ ಜಮೀನನ್ನು ಸರ್ಕಾರಕ್ಕೆ ದಾನವಾಗಿ ಕೊಟ್ಟಿದ್ದನ್ನು ಕೂಡಾ ರಾಜ್ಯ ಸರ್ಕಾರ ಸ್ಮರಿಸದೆ ಹೋಗಿದ್ದು ದುರ್ದೈವದ ಸಂಗತಿ. ಸದರಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲು ಬಿಜೆಪಿ ಶಾಸಕರಾಗಿದ್ದ ದಿ ಎಸ್.ವಿ. ಬಿದರೂರ ಹಾಗೂ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರ ಇಚ್ಛಾಶಕ್ತಿಯೇ ಕಾರಣ.
ಕೆ.ಎಚ್. ಪಾಟೀಲರ ನಾಮಕರಣ ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಚಳುವಳಿ, ಪಂಜಿನ ಮೆರವಣಿಗೆ ಮಾಡುವದು ಹಾಗೂ ಪಂ. ಪುಟ್ಟರಾಜ ಗವಾಯಿಗಳ ನಾಮಕರಣಕ್ಕೆ ಒತ್ತಾಯಿಸಿ ಅಭಿಪ್ರಾಯ ಸಂಗ್ರಹಕ್ಕೆ ಅಭಿಯಾನ ಕೈಗೊಳ್ಳುವ ಬಗ್ಗೆ ಸಭೆಯು ನಿರ್ಣಯಿಸಿತು. ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಮುಖರಾದ ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ, ಮೋಹನ ಮಾಳಶೆಟ್ಟಿ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ವಿನಾಯಕ ಮಾನ್ವಿ, ಅಶೋಕ ಕರೂರ, ಸಿದ್ದಣ್ಣ ಪಲ್ಲೇದ, ಅನಿಲ ಅಬ್ಬಿಗೇರಿ, ಚಂದ್ರು ತಡಸದ, ನಾಗರಾಜ ತಳವಾರ, ಮುತ್ತಣ್ಣ ಮುಶಿಗೇರಿ, ಅಶೋಕ ಸಂಕಣ್ಣವರ, ಕೆ.ಪಿ. ಕೋಟಿಗೌಡ್ರ, ಶಿವು ಹಿರೇಮನಿಪಾಟೀಲ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಡಿ.ಬಿ. ಕರೀಗೌಡ್ರ, ಮಂಜುನಾಥ ಶಾಂತಗೇರಿ ಉಪಸ್ಥಿತರಿದ್ದರು.
ಸದರಿ ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ ಕಾಂಗ್ರೆಸ್ ಸರ್ಕಾರದ ಯಾವ ಪಾತ್ರವೂ ಇಲ್ಲ. ಈಗಾಗಲೇ ಹಲವಾರು ಕಾಲೋನಿಗಳಿಗೆ, ಕಟ್ಟಡಗಳಿಗೆ, ರಸ್ತೆಗಳಿಗೆ, ವೃತ್ತಗಳಿಗೆ, ಕ್ರೀಡಾಂಗಣಗಳಿಗೆ, ರೈತ ಭವನಕ್ಕೆ ಕೆ.ಎಚ್. ಪಾಟೀಲರ ಹೆಸರನ್ನು ಇಡಲಾಗಿದ್ದು, ಸದರಿ ಮೆಡಿಕಲ್ ಕಾಲೇಜಿಗೆ ದಿ ಕೆ.ಎಚ್. ಪಾಟೀಲರ ಹೆಸರನ್ನು ನಾಮಕರಣ ಮಾಡುವದನ್ನು ಕೈ ಬಿಡಬೇಕೆಂದು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.