ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬಾಗಲಕೋಟೆ ನವನಗರದ 54ನೇ ಸೆಕ್ಟರ್‌ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ.
ದೀಪಕ್ ರಾಠೋಡ್(16) ಹಲ್ಲೆಗೊಳಗಾದ ಬುದ್ಧಿಮಾಂದ್ಯ ಬಾಲಕನಾಗಿದ್ದು, ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್‌ನಿಂದ ಬಾಲಕನ ಮೇಲೆ ಹಲ್ಲೆ ನಡೆಸಿದ್ದರೆ, ಅವರ ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿರುವುದು ತಿಳಿದುಬಂದಿದೆ.
ಜೊತೆಗೆ ಸಹ ಶಿಕ್ಷಕ ವಿಶಾಲ್ ಪಾಟೀಲ್ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಹಲ್ಲೆಯ ಕುರಿತು ಪ್ರಶ್ನಿಸಲು ಬಂದ ಬಾಲಕನ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿಷಯ ತಿಳಿದ ತಕ್ಷಣ ನವನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಸಂಬಂಧ ಶಾಲೆಯ ಮುಂದೆ ಮಕ್ಕಳ ಪೋಷಕರು ಜಮಾಯಿಸಿದ್ದು, ಶಿಕ್ಷಕ ದಂಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಶಿಕ್ಷಕ ಅಕ್ಷಯ್ ಇಂಗಳಕರ್ ಮತ್ತು ಅವರ ಪತ್ನಿ ಮಾಲಿನಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



