ವಿಜಯಸಾಕ್ಷಿ ಸುದ್ದಿ, ಧಾರವಾಡ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಪ್ರಕಾರ ಬೇವಿನ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆ ಸೇರಿಸಿ, ಪ್ರತಿ ದಿನ ಕೈ-ಕಾಲು ಮತ್ತು ದೇಹಕ್ಕೆ ಹಚ್ಚುವದರಿಂದ ಡೆಂಘೀ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಮತ್ತು ದೃಷ್ಟಿ ನರ್ಸಿಂಗ್ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡೆಂಘೀ ಮುಂಜಾಗೃತಾ ಜಾಗೃತಿ ಜಾಥಾ ಹಾಗೂ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ ನೀಮ್ ಆಯಿಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇವಿನ ಎಣ್ಣೆ ಹಚ್ಚುವದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತವೆ. ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಘೀ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಬೇವಿನ ಎಣ್ಣೆ ಹಚ್ಚಿಕೊಳ್ಳಲು ಆರೋಗ್ಯ ಸಲಹೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಲಾರ್ವಾ ನಾಶ, ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ ಮತ್ತು ಕರಪತ್ರಗಳ ವಿತರಣೆ ಕಾರ್ಯಕ್ರಮಗಳನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆಟೋ ಚಾಲಕ ಇಸಾಕ್ ಮುಜಾವರ್, ಮೈಮುನಿ ನಿಸಾ ಬಡಬಡೆ, ಬೀಬಿ ಜಾನ್ ಹಾಗೂ ಮಾದರಸಾಬ್ ತಹಸೀಲ್ದಾರ ಸೇರಿದಂತೆ ಮಾಳಾಪುರದ ವಿವಿಧ ಮನೆಗಳಿಗೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಬೇವಿನ ಎಣ್ಣೆ, ಕರಪತ್ರ ವಿತರಿಸಿ ಡೆಂಗ್ಯೂ ನಿರ್ಮೂಲನೆ ಬಗ್ಗೆ ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಸುಜಾತಾ ಹಸವೀಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್, ಡಿಎಂಓ ಡಾ. ಮಂಜುನಾಥ, ಕಿಟಶಾಸ್ತçಜ್ಞ ಮಂಜುನಾಥ, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ನ ಅಧ್ಯಕ್ಷೆ ಗೌರಿ ಮಾಧನಬಾವಿ, ಕಾರ್ಯದರ್ಶಿ ಸ್ಮಿತಾ ಮಂತ್ರಿ, ಪಾಲಿಕೆ ಸದಸ್ಯ ರಾಜಶೇಖರ ಕಮತಿ, ಬಿಎಚ್‌ಇಓ ರೇಖಾ ಬ್ಯಾಡಗಿ, ರೋಟರಿ ಕ್ಲಬ್ ಆಫ್ ಸೇವನ್ ಹಿಲ್ಸ್ ಸದಸ್ಯರು ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ದೃಷ್ಟಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾರ್ವಜನಿಕರು ಡೆಂಘೀ ನಿಯಂತ್ರಣ ಬಗ್ಗೆ ಜಾಗೃತಿ ವಹಿಸಬೇಕು. ಮನೆಯಲ್ಲಿ ನೀರು ಸಂಗ್ರಹ ಮಾಡುವ ಕೃತಕ ಬಾವಿ, ಸಿಂಟೆಕ್ಸ್ ಹಾಗೂ ನೀರು ತುಂಬಿಸುವ ತೊಟ್ಟಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡುವ ಮೂಲಕ ಡೆಂಘೀ ಜ್ವರದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.



