ವಿಜಯಸಾಕ್ಷಿ ಸುದ್ದಿ, ಗದಗ: ಅವಕಾಶ ವಂಚಿತ ಪ.ಜಾ ಮತ್ತು ಪ.ಪಂ ಅಲೆಮಾರಿ ಸಮದಾಯದವರಿಗೆ ಶಿಕ್ಷಣ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸರ್ವತೋಮುಖ ಅಭಿವೃದ್ಧಿಗೆ ಇಲಾಖಾ ಅಧಿಕಾರಿಗಳು ವಿಶೇಷ ಕಾಳಜಿಯಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಹಾಗು ಜಿಲ್ಲಾ ಅನುಷ್ಠಾನ ಸಮಿತಿಯ ಜಂಟಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ನಿವೇಶನ ಸಮಸ್ಯೆ ಇರುವವರಿಗೆ ಹತ್ತಿರದಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ನೀಡಲಾಗುವುದು. ಈಗಾಗಲೇ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಜಾತಿ ಪ್ರಮಾಣಪತ್ರದ ಸಮಸ್ಯೆ ಕುರಿತು ಈಗಾಗಲೇ ಸಭೆಗಳು ಜರುಗಿದ್ದು, ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಸರಿಯಾದ ಮಾರ್ಗ ಕಂಡುಕೊಳ್ಳಲು ತಹಸೀಲ್ದಾರರಿಗೆ ಸೂಚಿಸಲಾಗುವುದು ಎಂದರು.
ನಂತರ ಮಾತನಾಡಿದ ನಿಗಮದ ಅಧ್ಯಕ್ಷರು, ನರಗುಂದ ಪಟ್ಟಣದ ಹರಿಣಿ ಶಿಕಾರಿ ಸಮುದಾಯದವರಿಗೆ ನಿವೇಶನಗಳ ಸಮಸ್ಯೆಯಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು. ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದ್ದು, ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಈ ಜನರಿಗೆ ಶುಚಿತ್ವದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪುರಸಭೆ ವತಿಯಿಂದ ನೀರಿಗೆ ನಳದ ಸೌಲಭ್ಯ ಈಗಾಗಲೇ ಇದ್ದು, ಶುದ್ಧ ನೀರು ಒದಗಿಸಲು ಕ್ರಮವಹಿಸಲಾಗುವದು. ಮಹಿಳೆಯರಿಗೆ ಗೌರವ ಘಟಕ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮುಂಡರಗಿ ಪಟ್ಟಣದ ಕುಂಚಿ ಕೊರವ ಸಮುದಾಯದವರ ೩೫ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ೨೮ ಜನರ ಅರ್ಜಿಗಳು ಆಯ್ಕೆಯಾಗಿದೆ. ಶೀಘ್ರದಲ್ಲಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು. ಮನೆ ನಿರ್ಮಾಣ, ಕುಡಿಯುವ ನೀರು ಮತ್ತು ಬೀದಿದೀಪದ ಸಮಸ್ಯೆ, ವಯಸ್ಕರ ಶಿಕ್ಷಣ ಕುರಿತಂತೆ ಕ್ರಮ ವಹಿಸಬೇಕು ಎಂದು ಪಲ್ಲವಿ ಜಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮುಂಡರಗಿಯಲ್ಲಿ ಈಗಾಗಲೇ ಜಮೀನು ಲಭ್ಯವಿದ್ದು, ಈ ಹಿಂದೆ ಫಲಾನುಭವಿಗಳ ಪಟ್ಟಿಯೂ ತಯಾರಾಗಿತ್ತು. ಫಲಾನುಭವಿಗಳ ಪಟ್ಟಿ ಸರಿಯಿಲ್ಲ ಎಂದು ವಿರೋಧ ವ್ಯಕ್ತವಾಗಿದ್ದರಿಂದ ಹೊಸ ಪಟ್ಟಿಯ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಆ ಸಮುದಾಯವರಿಗೆ ಶಿಕ್ಷಣ ಒದಗಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧ್ಯಕ್ಷೆ ಪಲ್ಲವಿ ಜಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಗಮದ ವಿಶೇಷ ಅಧಿಕಾರಿ ಆನಂದ ಏಕಲವ್ಯ, ನಗರಸಭೆ ನಾಮನಿರ್ದೇಶಿತ ಸದಸ್ಯ ದುರ್ಗೇಶ ವಿಭೂತಿ, ಜಿಲ್ಲಾ ಅಲೆಮಾರಿ ಅನುಷ್ಟಾನ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಹುಲ್ಲೇಶ ಭಜಂತ್ರಿ, ಹುಸೇನಪ್ಪಾ ಗಡ್ಡದವರ, ಶಿವರಾಜ ಕಡೆಮನಿ, ಲಕ್ಷ್ಮಣ ಶೇಷಗಿರಿ, ಮೇನಕಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಡಿಡಿಎಲ್ ಆರ್. ರುದ್ರಗೌಡ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ, ಡಿಯುಡಿಸಿ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಮೀನುಗಾರಿಗೆ ಮಾಡುವವರಿಗೆ ಈಗಾಗಲೇ ಮೀನುಗಾರಿಕೆ ಇಲಾಖೆಯಿಂದ ವಿಮೆ ಸೌಲಭ್ಯವಿದ್ದು, ಕನಿಷ್ಟ ವಂತಿಕೆಯನ್ನು ಪಾವತಿಸಿ ವಿಮೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.



