ಬೆಂಗಳೂರು: ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ 21 ವರ್ಷದ ಯುವತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ವೈದ್ಯನೊಬ್ಬನನ್ನು ಅಶೋಕನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರವೀಣ್ ರೋಡ್ರಿಗಸ್ ಎಂದು ಗುರುತಿಸಲಾಗಿದ್ದು, ಚರ್ಮರೋಗ ತಜ್ಞನಾಗಿದ್ದ ಎಂದು ತಿಳಿದುಬಂದಿದೆ. ಸಂಬಂಧ 21 ವರ್ಷದ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ವೈದ್ಯರು ಪರಿಸ್ಥಿತಿಯ ಲಾಭ ಪಡೆದು ಚರ್ಮದ ಸೋಂಕನ್ನು ಪರೀಕ್ಷಿಸುವ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಹಲವಾರು ಬಾರಿ ತನ್ನನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ ಹಾಗೂ ನನ್ನ ಜತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಪರೀಕ್ಷೆ ಮಾಡಬೇಕು ಎಂದು ವೈದ್ಯರು ತನ್ನ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಖಾಸಗಿಯಾಗಿ ಸಮಯ ಕಳೆಯಲು ಹೋಟೆಲ್ ರೂಮ್ಗೆ ಬರುವಂತೆ ಹೇಳಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ನಡೆದ ನಂತರ ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಯುವತಿಯ ಕುಟುಂಬದವರು, ಅಕ್ಕ-ಪಕ್ಕದ ನಿವಾಸಿಗಳೊಂದಿಗೆ ಕ್ಲಿನಿಕ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಹಾಗೂ ವೈದ್ಯರನ್ನು ಬಂಧಿಸಿದ್ದಾರೆ. ಆದರೆ ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಮಾಡಿದ ಚಿಕಿತ್ಸೆಯ ಕ್ರಮವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.