ವಿಜಯಸಾಕ್ಷಿ ಸುದ್ದಿ, ಡಂಬಳ : ಡಂಬಳ ಹೋಬಳಿಯ ಪೇಠಾ ಆಲೂರ, ಮೇವುಂಡಿ, ಯಕ್ಲಾಸಪೂರ, ಡೋಣಿ, ಚಿಕ್ಕವಡ್ಡಟ್ಟಿ, ಸೇರಿದಂತೆ ಹೋಬಳಿಯ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಬಾಂಧವರು ಬುಧವಾರ ಮೊಹರಂ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು.
ಕಳೆದ ಐದು ದಿನಗಳಿಂದ ಸ್ಥಾಪಿಸಿ, ಪೂಜಿಸಲಾಗಿದ್ದ ಅಲ್ಲಾದೇವರಿಗೆ ಭಕ್ತರು ಕೈಮುಗಿದು ನಮಸ್ಕರಿಸಿ ಪೂಜೆ ಸಲ್ಲಿಸಿದರು. ಬೆಂಕಿಯ ಕೆಂಡಹಾಯ್ದ ಅಲ್ಲಾದೇವರಿಗೆ ಸಾವಿರಾರು ಭಕ್ತರು ಭಕ್ತಿ ಸಮರ್ಪಿಸಿದರು.
ಹೋಬಳಿಯ ಗ್ರಾಮಗಳಲ್ಲಿ ಡೋಲಿಗಳ ಮೆರವಣಿಗೆಯಲ್ಲಿ ವಿವಿಧ ಹೆಜ್ಜೆ ಮೇಳಗಳಿಂದ ಹೆಜ್ಜೆಯನ್ನು ಹಾಕಿದರೆ, ಹಿಂದೂ-ಮುಸ್ಲಿಂ ಭಕ್ತರು ಹುಲಿ ವೇಷ ಮತ್ತು ಅಳ್ಳೊಳ್ಳಿ ವೇಷವನ್ನು ಹಾಕಿ ಗೌಳಗೇರ ಅಲ್ಲಾದೇವರ ಅಗ್ನಿ ಕುಂಡದ ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿಯನ್ನು ಸಮರ್ಪಿಸಿದರು.
ಡಂಬಳ ಗ್ರಾಮದ ಮುಖ್ಯ ಬಜಾರ ಬಳಿ ಸೇರಿದ ಎಲ್ಲಾ ಅಲ್ಲಾದೇವರ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿ ಭಾವೈಕ್ಯತೆಯಿಂದ ಸಕ್ಕರೆ ಓದಿಕೆ ಮಾಡಿಸಿ ಭಕ್ತಿಯನ್ನು ಸಮರ್ಪಿಸಿದರು. ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ಸಂಜೆ ಡಂಬಳ ಗ್ರಾಮದ ಕೆರೆಗೆ ಅಲ್ಲಾದೇವರ ಪಂಜಾಗಳು ತೆರಳಿದವು.