ಗುರು ಕರುಣೆಯಿಂದ ಆತ್ಮ ಸಾಕ್ಷಾತ್ಕಾರ : ಶ್ರೀ ರಂಭಾಪುರಿ ಶ್ರೀಗಳು

0
Dharma Awareness Ceremony on the occasion of Guru Pournima at Sri Rambhapuri Peetha
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಸಕಲ ಜೀವ ರಾಶಿಗಳಿಗೆ ಒಳಿತನ್ನೇ ಬಯಸುವ ಶ್ರೀ ಗುರು ಕರುಣಾಸಾಗರ. ಶ್ರೀ ಗುರು ಅನಂತ ಅರಿವಿನ ಚೈತನ್ಯ ಮೂರ್ತಿ. ಗುರು ಕರುಣೆಯಿಂದ ಸೌಭಾಗ್ಯ ಸಂಪತ್ತು ಪ್ರಾಪ್ತಿ. ಗುರು ಕರುಣೆಯಿಂದ ಶಿಷ್ಯನಿಗೆ ಆತ್ಮ ಸಾಕ್ಷಾತ್ಕಾರ ದೊರಕುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಶ್ರೀ ಗುರು ಆಧ್ಯಾತ್ಮ ಲೋಕದ ಚಕ್ರವರ್ತಿ. ಕಾಲದಿಂದ ಅವಿಚ್ಛೇದನವಾಗದ ತತ್ವ ಜ್ಞಾನವುಳ್ಳವನೇ ಪರಮ ಗುರು. ಶ್ರೀ ಗುರುವಿನ ಸ್ಥಾನಮಾನ ಎಂದೆಂದಿಗೂ ಮರೆಯಲಾಗದು. ಸತ್ಯಾನುಭೂತಿಗಾಗಿ ಸಮಸ್ತ ಜಗದಲ್ಲಿ ಸಂಚರಿಸಿ ಬಂದವ ನಿಜವಾದ ಗುರು. ಭೌತಿಕ ಸಂಬಂಧಗಳು ನಾಶಗೊಂಡರೂ ಸಹ ಗುರು ಶಿಷ್ಯರ ಸಂಬಂಧ ಯಾವಾಗಲೂ ಶಾಶ್ವತ. ಗುರುವಿಲ್ಲದ-ಗುರಿಯಿಲ್ಲದ ಮಾನವ ಜೀವನ ಶ್ರೇಯಸ್ಸು ಕಾಣಲು ಸಾಧ್ಯವಾಗದು ಎಂದರು.
ಈ ಪವಿತ್ರ ಸಮಾರಂಭದಲ್ಲಿ ಮೊದಲಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗುರು ಪೂರ್ಣಿಮೆ ನಿಮಿತ್ತ ಭಕ್ತಾಭಿಮಾನಿಗಳು ಪಾದಪೂಜೆ ನಡೆಸಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.
ಮಳಲಿ ಮಠದ ಡಾ. ನಾಗಭೂಷಣ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು, ಮಳಖೇಡ ಅಭಿನವ ಕಾರ್ತಿಕೇಶ್ವರ ಶ್ರೀಗಳು, ಗುಂಡೆಪಲ್ಲಿ ಶಿವಸಿದ್ಧ ಸೋಮೇಶ್ವರ ಶ್ರೀಗಳು, ಬೇರುಗಂಡಿ ರೇಣುಕ ಮಹಾಂತ ಶ್ರೀಗಳು, ರಟ್ಟಿಹಳ್ಳಿ ವಿಶ್ವೇಶ್ವರ ದೇವರು, ರೇವತಗಾಂವ ವಿಶ್ವನಾಥ ದೇವರು ಪವಿತ್ರ ಸಮಾರಂಭದಲ್ಲಿ ಪಾಲ್ಗೊಂಡು ಗುರು ಹಿರಿಮೆಯನ್ನು ಕೊಂಡಾಡಿದರು.
ಬೆಂಗಳೂರಿನ ಉದಯ ಮತ್ತು ಸಂಗಡಿಗರು, ಬ್ಯಾಡಗಿ ರವೀಂದ್ರ ದಂಪತಿಗಳು, ಸೊಲ್ಲಾಪುರ ರಾಜು ಚಡಚಣಕರ, ನಾಂದೇಡ ವಿನಾಯಕ, ಚಿಕ್ಕಮಗಳೂರಿನ ಉಪ್ಪಳ್ಳಿ ಬಸವರಾಜ ಮತ್ತು ದೇವರಾಜು ಸೇರಿದಂತೆ ಹಲವಾರು ಗಣ್ಯರಿಗೆ, ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಉಟಗಿ ಹಿರೇಮಠದ ಶಿವಪ್ರಸಾದ ದೇವರು ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು. ಪ್ರಾತಃಕಾಲದಲ್ಲಿ ಗುರು ಪೌರ್ಣಿಮೆಯ ನಿಮಿತ್ತ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು.
ಪರಶಿವನ ಸಾಕಾರ ಇನ್ನೊಂದು ರೂಪವೇ ಶ್ರೀ ಗುರು. ಅಂತರಂಗ -ಬಹಿರಂಗ ಶುದ್ಧಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆಯೇ ಹೊರತು ಬೇರಾರಿಗಿಲ್ಲ. ವೀರಶೈವ ಧರ್ಮ ಮೊದಲ್ಗೊಂಡು ಎಲ್ಲಾ ಧರ್ಮಗಳಲ್ಲಿ ಶ್ರೀ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿಕೊಟ್ಟಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಂತರಂಗದ ಕತ್ತಲೆ ಕಳೆಯಲು ಗುರು ಬೇಕೇ ಬೇಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Spread the love
Advertisement

LEAVE A REPLY

Please enter your comment!
Please enter your name here