HomeGadag Newsಉಭಯ ಶ್ರೀಗಳ ದಿವ್ಯಾತ್ಮ ಇಂದಿಗೂ ಅಮರ

ಉಭಯ ಶ್ರೀಗಳ ದಿವ್ಯಾತ್ಮ ಇಂದಿಗೂ ಅಮರ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ವೀರೇಶ್ವರ ಪುಣ್ಯಾಶ್ರಮ ಹಾಗೂ ಕಾಶಿ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಕಾಶಿ ಪೀಠದ ಪೂಜ್ಯಶ್ರೀ ಜ. ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರಿ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಶೀಪೀಠದ ಪೂರ್ವಾಶ್ರಮದ ಅಮರೇಶ್ವರ ಮಠದ ಅಮರೇಶ್ವರ ಶ್ರೀಗಳು ಸಂಗೀತವನ್ನು ಕಲಿಯಲು ಗದುಗಿನ ವಿರೇಶ್ವರ ಪುಣ್ಯಾಶ್ರಮಕ್ಕೆ ಬಂದು ಪಂಚಾಕ್ಷರಿ ಗವಾಯಿಗಳವರ ಶಿಷ್ಯರಾಗಿ ಸಂಗೀತ ಜ್ಞಾನವನ್ನು ಪಡೆದಿದ್ದಾರೆ. ಎಲ್ಲ ಸಂಪತ್ತುಗಳಲ್ಲಿ ಜ್ಞಾನ ಸಂಪತ್ತು ದೊಡ್ಡದು. ಬೇರೆ ಸಂಪತ್ತು ಹಂಚಿದರೆ ಕರಗಿ ಹೋಗುತ್ತದೆ. ಆದರೆ, ಜ್ಞಾನ ಸಂಪತ್ತು ಹಂಚಿದರೆ ದ್ವಿಗುಣವಾಗುತ್ತ ಹೋಗುತ್ತದೆ. ಅಂಧರ ಬಾಳಿಗೆ ಜ್ಞಾನದೀಪವನ್ನು ವಿರೇಶ್ವರ ಪುಣ್ಯಶ್ರಮ ನಿರಂತರವಾಗಿ ನೀಡುತ್ತ ಬಂದಿದೆ. ಶಿವನನ್ನು ಪೂಜೆ ಮಾಡಬೇಕಾದರೆ ಶಿವನಾಗಿ ಮಾಡಬೇಕು. ಅದರಂತೆ ಶಿವಯೋಗಿ ಪಂ. ಪುಟ್ಟರಾಜ ಗವಾಯಿಗಳನ್ನು ನಾವು ಕಂಡಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೂಡಿ ಜುಕ್ತಿಹಿರೇಮಠದ ಪೂಜ್ಯಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದಂತಹ ಗುರುಕುಲ ಜಗತ್ತಿನಲ್ಲಿಯೇ ಎಲ್ಲೂ ಇಲ್ಲ.

ಇದು ಸುಖದ ಆಶ್ರಮವಲ್ಲ ಇದನ್ನು ಕಟ್ಟಿ ಬೆಳೆಸಲು ಗುರುಗಳೊಂದಿಗೆ ಹೋರಾಟ ಮಾಡಿದ ಸಾಕಷ್ಟು ಹಿರಿಯ ಜೀವಿಗಳು ನಮ್ಮ ಕಣ್ಮುಂದೆ ಇದ್ದಾರೆ. ಸಮಾಜಕ್ಕೆ ಬೇಡವಾದ ಮಕ್ಕಳನ್ನು ಸಾಕಿ ಸಲುಹಿ ಅವರಿಗೆ ಸಂಸ್ಕಾರ, ಶಿಕ್ಷಣ, ಸಂಗೀತ ಜ್ಞಾನವನ್ನು ನೀಡಿ ಅವರ ಬಾಳನ್ನು ಬೆಳಗಿಸಿದವರು ಉಭಯ ಶ್ರೀಗಳು ಎಂದು ಹೇಳಿದರು.

ಅಡ್ನೂರ ಬೃಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಬೈಲಹೊಂಗಲದ ಡಾ. ಮಹಾಂತಯ್ಯ ಸ್ವಾಮಿಗಳು ಆರಾದ್ರಿಮಠ, ಗದಗಿನ ಅಡವಿಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಪೂಜ್ಯಶ್ರೀ ಮಹೇಶ್ವರಸ್ವಾಮೀಜಿ ಹೊಸಳ್ಳಿಮಠ ಅವರುಗಳು ಸಮ್ಮುಖ ವಹಿಸಿದ್ದರು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಆಭಾರ ಮನ್ನಣೆ ಸಲ್ಲಿಸಿದರು.

ಶ್ರೀ ಕುಮಾರೇಶ್ವರ ಕೃಪಾಪೋಷಿತ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ಜರುಗಿತು. ಶ್ರೀಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೀರೇಶ ಕೂಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ಅತಿಥಿಗಳನ್ನು ಸ್ವಾಗತಿಸಿದರು. ಶರಣಸೋಮನಾಳದ ಮಹದೇವಯ್ಯ ಶಾಸ್ತಿçಗಳು ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ಪಂ.ರಾಜಗುರು ಗುರುಸ್ವಾಮಿ ಕಲಕೇರಿ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟನ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಮ್ಸ್ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಿ.ಎಸ್. ಕರೇಗೌಡ್ರ, ಡಾ. ವಿ.ಎಂ. ಮಲ್ಲಗೌಡ್ರ, ಪಿ.ಸಿ. ಹಿರೇಮಠ, ಎಂ.ಆರ್. ಹಿರೇಮಠ, ಲಿಂಗರಾಜ ಗುಡಿಮನಿ, ಅನಿಲ್ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ, ವಿ.ಎಸ್. ಮಾಳೆಕೊಪ್ಪಮಠ, ಅಂಬರೀಶ ಹಿರೇಮಠ, ಜಿ.ಬಿ. ನೀಲರೆಡ್ಡಿ, ಎಂ.ಎಂ. ಕುಕನೂರ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಪೂಜ್ಯರಿಂದ ಶ್ರೀಗುರು ರಕ್ಷೆ ನೀಡಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅಡ್ನೂರ ದಾಸೋಹಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಯಯ್ಯಜ್ಜನವರು ಅಧ್ಯಕ್ಷತೆ ವಹಿಸಿದ್ದರು. ಅರಳಿಕಟ್ಟಿಯ ಗಂಗಾಧರಯ್ಯ, ಧಾರವಾಡದ ಈರಪ್ಪ ಅಕ್ಕಿ, ಹುಬ್ಬಳ್ಳಿಯ ಚಂದ್ರಶೇಖರ ಶಿವಶಿಂಪಗೇರ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ರುದ್ರಗೌಡ ರಬ್ಬನಗೌಡ್ರ, ಗೊಂಡಬಾಳದ ಶರಣಗೌಡ್ರ ಬಾವಿಕಟ್ಟಿ, ದೇವಪ್ಪ ಗುಗ್ಗರಿ, ಕೆಂಪಣ್ಣ ಹೂಗಾರ, ಸಿದ್ದಲಿಂಗಪ್ಪ ಶಿವಶಿಂಪಿ ಅವರಿಗೆ ಗುರುರಕ್ಷೆ ನೀಡಲಾಯಿತು.

ರಾತ್ರಿ ಗಾನ ಶಿವಯೋಗಿ, ಕವಿಚಕ್ರವರ್ತಿ ಪದ್ಮಭೂಷಣ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ `ಶ್ರೀ ಕೃಷ್ಣಗಾರುಡಿ’ ಪೌರಾಣಿಕ ನಾಟಕವನ್ನು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಅಡ್ನೂರ ದಾಸೋಹಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಶಿವಸಂಗಮ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐನ ನಿವೃತ್ತ ಅಧಿಕಾರಿ ಪರಶುರಾಮ ಕಟ್ಟಿಮನಿ ನಾಟಕವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಿಎಸ್ಪಿ ಜೆ.ಎಚ್. ಇನಾಮದಾರ, ಜೋಹರಾ ಕೌತಾಳ, ಗಣ್ಯ ವರ್ತಕರಾದ ನಾಡಗೌಡ್ರು ಅಪ್ಪಸಾಬ ಗೌಡ್ರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!