ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಧರಣಿ ಕೈಗೊಂಡರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಡಿ.ಎಸ್. ಕುಲಕರ್ಣಿ ಮಾತನಾಡಿ, ಸರಕಾರದ ವತಿಯಿಂದ ಕನಿಷ್ಠ ಸೌಲಭ್ಯಗಳನ್ನು ನೀಡದೆ ಹೆಚ್ಚಿನ ಒತ್ತಡವನ್ನು ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಹೇರುತ್ತಿದ್ದು, ಇದು ನಮಗೆ ಆಗುತ್ತಿರುವ ಅನ್ಯಾಯವಾಗಿದೆ. ಸರಕಾರಿ ರಜಾ ದಿನಗಳಲ್ಲಿಯೂ ಸಹ ಕೆಲಸವನ್ನು ಮಾಡಬೇಕಾಗಿದ್ದು, ಆನ್‌ಲೈನ್ ತಂತ್ರಾಂಶಗಳ ಮೂಲಕ ಹೆಚ್ಚು ಕೆಲಸಗಳನ್ನು ನಿರ್ವಹಿಸಬೇಕಿದೆ.
ಅದಕ್ಕೆ ತಕ್ಕಂತೆ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ನೀಡಬೇಕು. ಎಲ್ಲ ಇಲಾಖೆಗಳಲ್ಲಿ ನೀಡುವಂತೆ ನಮಗೂ ಸಹ ಪತಿ-ಪತ್ನಿಯರಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ ಗ್ರಾಮ ಸಹಾಯಕರ ಹುದ್ದೆಗಳಿಗೆ ಯಾವುದೇ ಸೇವಾ ಭದ್ರತೆ ಇಲ್ಲದಂತಾಗಿದ್ದು, ಕೂಡಲೇ ಅವರನ್ನು ಖಾಯಂ ಮಾಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಇಲಾಖೆಯಲ್ಲಿ ಈಗಾಗಲೇ ಅನೇಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳ ಮೂಲಕ ಕಾರ್ಯನಿರ್ವಹಿಸಲು ಗ್ರಾಮ ಆಡಳಿತಾಧಿಕಾರಿಗಳಿ ಮತ್ತು ಸಹಾಯಕರಿಗೆ ಒತ್ತಡ ಹೇರಲಾಗುತ್ತಿದೆ. ಇವುಗಳನ್ನು ಕೈಬಿಟ್ಟು ಎಲ್ಲರಂತೆ ನಮ್ಮನ್ನು ಗಣನೆಗೆ ತೆಗೆದುಕೊಂಡು, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ, ಎನ್.ಬಿ. ಕನೋಜ, ಪಿ.ಎಲ್. ವಿಭೂತಿ, ಆರ್.ಎನ್. ನೆಗಳೂರ, ಬಿ.ವೈ. ಮಲ್ಲಿಗವಾಡ, ಸುಬೇದಖಾನ್ ಪಠಾಣ, ಅರುಣ ದೊಡ್ಡಮನಿ, ಎನ್.ಐ. ಸೊನ್ನದ, ಸುಷ್ಮಾ ವಡಕಪ್ಪನವರ, ನಿರ್ಮಲಾ ಕೊಪ್ಪದಮಠ, ಲಕ್ಷ್ಮಿ ಓಲೇಕಾರ, ತಸ್ಮೀಯಾ ಮುಲ್ಲಾ ಮುಂತಾದವರಿದ್ದರು.