ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಪರೇಡ್ ವೀಕ್ಷಣೆಗೆ ತೆರಳುವ ಜೀಪ್ನಲ್ಲಿ ಡೀಸೆಲ್ ಸೋರಿಕೆ ಆಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಎಸ್, ಕನ್ನಡ ರಾಜ್ಯೋತ್ಸವದ ಸಂಭ್ರಮದ ಮಧ್ಯೆ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ನಡೆದಿದೆ.
ರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ತೆರಳಲು ಸಿದ್ಧರಾಗಿದ್ದ ಸಚಿವ ಸತೀಶ್ ಅವರ ಅಧಿಕೃತ ಜೀಪ್‌ನಿಂದ ಅಕಸ್ಮಾತ್ ಡೀಸೆಲ್ ಸೋರಿಕೆಯಾಗಿದೆ. ಧ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಪರೇಡ್ ವೀಕ್ಷಣೆಗೆ ಸಚಿವರು ಹೊರಟ ವೇಳೆ, ಜೀಪ್ ಕೆಳಭಾಗದಲ್ಲಿ ಇಂಧನ ಸೋರಿಕೆ ಕಂಡುಬಂದಿದೆ.
ಸ್ಥಳದಲ್ಲಿದ್ದ ಪೊಲೀಸರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದು, ಬೆಂಕಿ ಹೊತ್ತಿಕೊಳ್ಳದಂತೆ ಫೈರ್ ಕಂಟ್ರೋಲ್ ಗ್ಯಾಸ್ ಸಿಂಪಡಣೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ತಕ್ಷಣವೇ ವಾಹನವನ್ನು ಮೈದಾನದಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಆಸ್ತಿ ನಷ್ಟವಾಗದ ಕಾರಣದಿಂದ ಭಾರೀ ಅಪಾಯ ತಪ್ಪಿದಂತಾಗಿದೆ. ಈ ಘಟನೆ ಕೆಲಕಾಲ ರಾಜ್ಯೋತ್ಸವ ಸ್ಥಳದಲ್ಲಿ ಆತಂಕ ಸೃಷ್ಟಿಸಿತ್ತು ಎನ್ನಲಾಗಿದೆ.


