ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ವರ್ಷ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಸ್ವಸಹಾಯ ಗುಂಪುಗಳಿAದ 2500 ಅರ್ಹರಿಗೆ 90.85 ಕೋಟಿ ಸಾಲ/ಅನುದಾನ ನೀಡುವ ಗುರಿ ಹೊಂದಲಾಗಿದ್ದರೂ, ಕೇವಲ 1683 ಅರ್ಹರಿಗೆ 30.49 ಕೋಟಿ ಮಾತ್ರ ನೀಡಿಕೆಯಾಗಿದೆ. ಈ ಯೋಜನೆಯಲ್ಲಿ ಶೇ. 100ರಷ್ಟು ಗುರಿ ಸಾಧಿಸಬೇಕು. ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಸ್ವೀಕರಿಸುವುದಕ್ಕೆ ಬ್ಯಾಂಕರ್‌ಗಳು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾದರೆ, ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ (ಡಿಎಸ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಠೇವಣಿ ಮತ್ತು ಸಾಲದ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಬ್ಯಾಂಕ್ ಅಧಿಕಾರಿಗಳು ಕುರ್ಚಿಗೆ ಅಂಟಿಕೊಂಡು ಕೆಲಸ ಮಾಡಿದರೆ ಈ ವ್ಯತ್ಯಾಸ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಡಿಬಿಟಿ ಮೂಲಕ ಬರುವ ಹಣವನ್ನು ಸಾಲ ಸೌಲಭ್ಯಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎನ್ನುವ ಸುತ್ತೋಲೆ ಇದೆ. ಅಲ್ಲದೇ ಡಿಬಿಟಿ ಹಣವನ್ನು ಖಾತೆಗೆ ಜಮೆ ಮಾಡದೇ ತಡೆಹಿಡಿಯುವುದು ಸರಿಯಲ್ಲ. ಅಂಥ ಘಟನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದರು ಎಚ್ಚರಿಸಿದರು.
ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸುತ್ತಿರುವ 3630 ಮನೆಗಳ ಬಗ್ಗೆ ಚರ್ಚೆ ನಡೆದು, ಯೋಜನೆ ಮುಕ್ತಾಯಗೊಳ್ಳುವುದು ಯಾವಾಗ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಮನೆಗಳು ಪೂರ್ಣಗೊಂಡಿವೆ, ಇನ್ನು ಕೆಲವು ಅಪೂರ್ಣವಾಗಿವೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ, ಮತ್ತೆ ಕೆಲವರಿಗೆ ಸಾಲ ಸಿಗುತ್ತಿಲ್ಲ. ಈಗಾಗಲೇ ನಾಲ್ಕು ವರ್ಷಗಳು ಕಳೆದಿದ್ದು, ಹೀಗೆಯೇ ದಿನ ಕಳೆಯುತ್ತಿದ್ದರೆ ಯೋಜನೆಯೇ ಬದಲಾಗುತ್ತದೆ ಮತ್ತು ವೆಚ್ಚವೂ ಏರಿಕೆಯಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಸಿಇಒ ಭರತ್ ಎಸ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ, ಆರ್.ಬಿ.ಐ ಲೀಡ್ ಬ್ಯಾಂಕ್‌ನ ಜಿಲ್ಲಾ ಮಟ್ಟದ ಅಧಿಕಾರಿ ಸೂರಜ್ ಎಸ್, ಎಸ್.ಬಿ.ಐ ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬಾ ರೆಡ್ಡಿ, ನಬಾರ್ಡ್ನ ಡಿಡಿಎಂ ಮಯೂರ ಕಾಂಬಳೆ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಆದರೆ, ಅಂತಹ ಘಟಕಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಘಟಕ ಸ್ಥಾಪನೆಗೆ ಮುಂದೆ ಬರುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಅಂಥವರನ್ನು ಗುರುತಿಸಿ, ಸಾಲ ವಿತರಿಸುವ ಮೂಲಕ ಆರ್ಥಿಕ ಶಕ್ತಿ ನೀಡುವಂತಾಗಬೇಕು.
– ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ, ಗದಗ ಕ್ಷೇತ್ರ.