ವಿಜಯಸಾಕ್ಷಿ ಸುದ್ದಿ, ವಿಜಯಪುರ: ಡಿಜಿಟಲ್ ಕ್ರಾಂತಿಯಿಂದಾಗಿ ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು, ಪತ್ರಕರ್ತರು ಕೇವಲ ಪತ್ರಕರ್ತರಾಗಿ ಉಳಿದಿಲ್ಲ. ಹೀಗಾಗಿ ಭವಿಷ್ಯದಲ್ಲಿ ಪತ್ರಕರ್ತರಾಗುವವರು ಹಲವು ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು ಅಗತ್ಯವಾಗಿದೆ. ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಂಡು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ನಗರದ ಸಿಕ್ಯಾಬ್ ಎ.ಆರ್.ಎಸ್.ಐ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಕೆ. ಯಡಹಳ್ಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಪತ್ರಿಕಾ ದಿನಾಚರಣೆ ಪ್ರಯುಕ್ತ ‘ಬದಲಾಗುತ್ತಿರುವ ಪತ್ರಿಕೋದ್ಯಮದ ಸ್ವರೂಪ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಇಪ್ಪತ್ತು ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ನಡೆದಿದ್ದು, ನಿಜವಾದ ಪ್ರಜಾಪ್ರಭುತ್ವದ ಸಾಧನೆಗೆ ದಾರಿ ಮಾಡಿಕೊಟ್ಟಿವೆ. ಪತ್ರಿಕೆಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಎಂಬ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಮಾಧ್ಯಮ ಕ್ಷೇತ್ರ ಇನ್ನೂ ಹೆಚ್ಚು ಜನಪ್ರಿಯತೆಯನ್ನು ಪಡೆದು ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ. ಇಂದು ಪತ್ರಿಕೆಗಳು ಹೆಚ್ಚು ಪ್ರಜಾಪ್ರಭುತ್ವ ಸಾಧಿಸಿದ್ದು, ಪತ್ರಿಕೆಗಳು ಜನರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯವನ್ನು ಮಾಡಬೇಕಾಗಿದೆೆ. ಮುದ್ರಣ ಮಾಧ್ಯಮದಲ್ಲಿ ಭಾಷಾ ಶುದ್ಧತೆ, ಭಾಷಾ ಸ್ಪಷ್ಟತೆ ಹೊಂದಿರಬೇಕು. ಆದ್ದರಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ನೀವು ಪ್ರತಿ ದಿನ ಒಂದು ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಯನ್ನು ಓದಬೇಕು ಎಂದು ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಪತ್ರಿಕೋದ್ಯಮ ಕಾಲಘಟ್ಟದಲ್ಲಿ ಬದಲಾವಣೆಯನ್ನು ಕಾಣುತ್ತಾ ಬಂದಿದೆ. ಅದಕ್ಕೆ ಮುಖ್ಯ ಕಾರಣ ತಂತ್ರಜ್ಞಾನ. ಕಾರ್ಪೊರೇಟ್ ಸಂಸ್ಥೆಗಳು ಮಾಧ್ಯಮಗಳನ್ನು ಖರೀದಿ ಮಾಡುವುದರಿಂದ ಈ ಮಾಧ್ಯಮ ಕ್ಷೇತ್ರ ಏಕ ಸ್ವ್ವಾಮ್ಯತೆಯ ಕಡೆ ಸಾಗುತ್ತಿದೆ. ಇದು ಮಾಧ್ಯಮ ಕ್ಷೇತ್ರಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮಾಧ್ಯಮ ಸಶಕ್ತವಾಗಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವದ ಉಳಿಯುವಿಕೆ ಸಾಧ್ಯ ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ತಮೀನಾ ಕೋಲಾರ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಫಿಲೋಮಿನಾ ಅತಿಥಿಗಳ ಪರಿಚಯಿಸಿದರು. ಸುಷ್ಮಾ ಪವಾರ ನಿರೂಪಿಸಿದರು. ಪವಿತ್ರ ಕಂಬಾರ ವಂದಿಸಿದರು.