ಬೆಳಗಾವಿ: ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮತ್ತಷ್ಟು ಗರಿಗೆದರುತ್ತಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ, ಈಗಾಗಲೇ ಉರಿಯುತ್ತಿರುವ ರಾಜಕೀಯ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಬ್ರೇಕ್‌ಫಾಸ್ಟ್ ಮೀಟಿಂಗ್ ನಂತರ ಪರಿಸ್ಥಿತಿ ತಣ್ಣಗಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ವಿಷಯಕ್ಕೆ ಹೊಸ ತಿರುವು ಸಿಕ್ಕಿದ್ದು, ರಾಜಕೀಯ ಚಟುವಟಿಕೆಗಳು ಬೆಳಗಾವಿಗೆ ಸ್ಥಳಾಂತರಗೊಂಡಿವೆ.
ಚಳಿಗಾಲ ಅಧಿವೇಶನದ ಮಧ್ಯದಲ್ಲೇ ಸಿಎಂ–ಡಿಸಿಎಂ ಬಣಗಳ ನಾಯಕರು ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದು, ಇದರ ರಾಜಕೀಯ ಅರ್ಥೈಸುವಿಕೆಗಳು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿವೆ.
ಕಾಂಗ್ರೆಸ್ ಪಾಳೆಯಲ್ಲಿ ಈಗ ಡಿನ್ನರ್ ರಾಜಕೀಯ ಅಬ್ಬರ ಆರಂಭವಾಗಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳು ಪರಸ್ಪರ ಪೈಪೋಟಿಯಲ್ಲಿರುವುದು ಸ್ಪಷ್ಟವಾಗಿದೆ. ಮೊನ್ನೆ ಸಿದ್ದರಾಮಯ್ಯ ಆಪ್ತರು ಡಿನ್ನರ್ ಕೂಟದಲ್ಲಿ ಒಟ್ಟುಗೂಡಿದರೆ,
ನಿನ್ನೆ ಡಿಕೆ ಶಿವಕುಮಾರ್ ಬೆಂಬಲಿಗರು 40ಕ್ಕೂ ಹೆಚ್ಚು ಶಾಸಕರು, ಕೆಲವು ಸಚಿವರು ಮತ್ತು ವಿಧಾನಪರಿಷತ್ ಸದಸ್ಯರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ರಾಜ್ಯ ರಾಜಕೀಯದ ದಿಕ್ಕು ಬದಲಾಯಿಸುವಂತ ಚರ್ಚೆಗಳು ಈ ಕೂಟಗಳಲ್ಲಿ ನಡೆದಿರಬಹುದೆಂಬ ಊಹಾಪೋಹಗಳು ಹೆಚ್ಚಾಗುತ್ತಿದ್ದು, ಡಿನ್ನರ್ ಪಾಲಿಟಿಕ್ಸ್ ಕಾಂಗ್ರೆಸ್ ಒಳರಾಜಕಾರಣಕ್ಕೆ ಹೊಸ ತಿರುವು ತಂದಿದೆ.



