ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ.ಎಸ್. ಪಾಟೀಲರು ವ್ಯಕ್ತಿಯಷ್ಟೇ ಅಲ್ಲ, ಬದಲಾಗಿ ಅವರೊಂದು ಶಕ್ತಿ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಿನಕಾಯಿ ಹೇಳಿದರು.
ಅವರು ಬುಧವಾರ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ರೋಣ ಪಿಎಲ್‌ಡಿ ಬ್ಯಾಂಕ್ ರೈತರ ಪ್ರತಿಷ್ಠಿತ ಬ್ಯಾಂಕ್ ಎನ್ನುವುದರಲ್ಲಿ ಸಂದೇಹವಿಲ್ಲ. ಅಲ್ಲದೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಜನ್ಮ ತಾಳಿದ ದಿನದಿಂದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಒಲುವು ತೊರುವ ಮೂಲಕ ಆಡಳಿತವನ್ನು ನೀಡಿದ್ದಾರೆ. ಮುಖ್ಯವಾಗಿ ಶಾಸಕ ಜಿ.ಎಸ್. ಪಾಟೀಲ ಅನೇಕ ಯೋಜನೆಗಳನ್ನು ತರುವ ಮುಖೇನ ಅವುಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ತೋರಿದ್ದರ ಫಲವಾಗಿ ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ ಎಂದರು.
14 ಸ್ಥಾನಗಳನ್ನು ಹೊಂದಿರುವ ಪಿಎಲ್‌ಡಿ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇನ್ನು 7 ಕ್ಷೇತ್ರಗಳಿಗೆ ಜ.5ರಂದು ಚುನಾವಣೆ ನಿಗದಿಯಾಗಿತ್ತು. ಅಲ್ಲದೆ ಚುನಾವಣೆ ನಂತರ ಮತಗಳ ಎಣಿಕೆ ಕಾರ್ಯ ನಡೆದಿತ್ತು. ಆದರೆ ನ್ಯಾಯಲಯದಲ್ಲಿ ಪ್ರಕರಣವಿದ್ದ ಕಾರಣ ವಿಜೇತ ಅಭ್ಯರ್ಥಿಗಳ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಎಣಿಕೆಯಲ್ಲಿ ಮುಂದಿದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದ್ದರು.
ಆದರೆ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನಿಡಲಾಗಿದ್ದು, ಸವಡಿ ಕ್ಷೇತ್ರದ ಪ್ರಕರಣ ಮಾತ್ರ ನ್ಯಾಯಲಯದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಮುಖಂಡರಾದ ವಿ.ಆರ್. ಗುಡಿಸಾಗರ, ಸದಸ್ಯರಾದ ಬಸವರಾಜ ನವಲಗುಂದ, ಶೇಖರಪ್ಪ ಅಬ್ಬಿಗೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ, ಕಾಶೀಮಸಾಬ ಪಿಂಜಾರ್, ಪಸಾರದ ಸೇರಿದಂತೆ ಹೊಸಳ್ಳಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.