ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯಿಂದ ಬಂದಿರುವ ರಿಯಾಯಿತಿ ದರದ ಕಡಲೆ ಬಿತ್ತನೆ ಬೀಜವನ್ನು ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ರೈತರಿಗೆ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಈ ವರ್ಷದ ಅತಿವೃಷ್ಟಿಗೆ ಮುಂಗಾರು ಹಂಗಾಮಿನ ಹೆಸರು, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬೆಳೆಗಳಾದರೂ ಚೆನ್ನಾಗಿ ಬರುತ್ತವೆ ಎಂಬ ಆಶೆಯಿಂದ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಮುಂಗಾರು ಬೆಳೆ ಕಳೆದುಕೊಂಡು ಪರಿತಪಿಸುತ್ತಿರುವ ರೈತರಿಗೆ ಸರ್ಕಾರ ಆದಷ್ಟು ಬೇಗ ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರ ಕೊಟ್ಟು ರೈತರ ಹಿತ ಕಾಪಾಡಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣಪ್ಪ ಮನಗೂಳಿ ಮಾತನಾಡಿ, ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ಸದ್ಯ 649 ಕ್ವಿಂಟಲ್ ಕಡಲೆ ಮತ್ತು 19.80 ಕ್ವಿಂಟಲ್ ಬಿಳಿ ಜೋಳದ ಬಿತ್ತನೆ ಬೀಜಗಳ ದಾಸ್ತಾನಿದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬೀಜ ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಬಸಣ್ಣ ಹಂಜಿ, ವಿ.ಜಿ. ಪಡಿಗೇರಿ, ನಿಂಗಪ್ಪ ಬನ್ನಿ, ಅಶೋಕ ನೀರಾಲೋಟಿ, ರಮೇಶ ಉಪನಾಳ, ಪಿ.ಕೆ. ಹೊನ್ನಪ್ಪನವರ ಮುಂತಾದವರು ಇದ್ದರು.



