ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಗಂಡು ಮಕ್ಕಳ ನಂ.೧ ಬೆಟಗೇರಿಯಲ್ಲಿ ವಿದ್ಯಾರ್ಥಿಗಳಿಗೆ ಟೇಬಲ್-ಖುರ್ಚಿ, ಐಡಿ ಕಾರ್ಡ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲಿಕಸಾಬ ಬೇಲೇರಿ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಾ ತಾಪಸ್ಕರ್ ಮಾತನಾಡುತ್ತಾ, ಮಹಿಳೆ ಒಬ್ಬಳು ಕಲಿತರೆ ಇಡೀ ಕುಟುಂಬವನ್ನು ಕಲಿಸುವ ಜವಾಬ್ದಾರಿ ಅವಳ ಮೇಲೆ ಇರುತ್ತದೆ. ಹೀಗಾಗಿ ಇಲ್ಲಿ ಬಂದಿರುವ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೌಲಾನಾ ಅಬ್ದುಲಗಪೂರ್ ಪಲ್ಲೇದ ಮಾತನಾಡಿ, ಮನೆಯಲ್ಲಿ ತಾಯಂದಿರು ಮೊಬೈಲ್-ಟಿವಿಗಳಿಂದ ದೂರವಿದ್ದು ತ್ಯಾಗ ಮಾಡಿದಾಗ ಮಾತ್ರ ಮಗು ಸಾಧಕನಾಗಲು ಸಾಧ್ಯ. ಹೀಗಾಗಿ ತಮ್ಮೆಲ್ಲರ ಜವಾಬ್ದಾರಿ ಬಹಳಷ್ಟು ಇದೆ ಅದನ್ನರಿತು ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡುತ್ತಾ, ಅತ್ಯಂತ ಕಡಿಮೆ ಅವಧಿಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ಟೇಬಲ್-ಖುರ್ಚಿ ವ್ಯವಸ್ಥೆ ಮಾಡಿಕೊಟ್ಟಿರುವ ಶಿಕ್ಷಕರ ಕಾರ್ಯ ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ 30ವರೆಗೆ ಮಗ್ಗಿ ಹೇಳಿದ ವಿದ್ಯಾರ್ಥಿ ಯೂಸೂಫ್‌ನಿಗೆ ಶಾಲೆಯ ಶಿಕ್ಷಕರಾದ ಫಾರೂಕ್ ನಾಯಕ ಅವರು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಿಗಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಹುಲ್ಲೂರು ಅವರ ಪತಿಯವರಾದ ಸಲೀಂ ಬಳಬಟ್ಟಿ 4 ಟೇಬಲ್, 14 ಖುರ್ಚಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ವಿದ್ಯಾರ್ಥಿಗಳಿಗೆ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಐ.ಡಿ ಕಾರ್ಡ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ವೇದಿಕೆಯ ಮೇಲೆ ಎಂ.ಜಿ. ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಕ್ತುಮಸಾಬ ನಾಯಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ಶಹರ ವಲಯದ ಕಾರ್ಯದರ್ಶಿ ಕನಾಜ, ಖಜಾಂಚಿ ರಶೀದ, ಶಾಮ ಲಾಂಡೆ, ಪ್ರಕಾಶ ಮಂಗಳೂರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಆರ್‌ಪಿ ಎಂ.ಎ. ಯರಗುಡಿ, ಮನುಷ್ಯನು ಬದಲಾವಣೆಯಾಗುವುದೇ ಶಿಕ್ಷಣದಿಂದ. ಹೀಗಾಗಿ ಅತ್ಯುತ್ತಮವಾದ ಶಿಕ್ಷಣ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ತನು, ಮನ, ಧನದಿಂದ ಕೆಲಸ ಮಾಡುತ್ತಿರುವ ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ. ಅಲ್ಲದೆ ಪಾಲಕರು ಮಕ್ಕಳನ್ನು ಮನೆಯಲ್ಲಿ ಮುಂದೆ ಕೂಡಿಸಿಕೊಂಡು ಗಟ್ಟಿ ಧ್ವನಿಯಲ್ಲಿ ಓದುವಂತೆ ಪ್ರೇರೇಪಿಸಬೇಕು. ಪ್ರತಿನಿತ್ಯ ಅವರ ನೋಟ್ ಪುಸ್ತಕಗಳನ್ನು ಪರಿಶೀಲಿಸಿದಾಗ ಓದಿನ ಕಡೆ ಮಕ್ಕಳ ಗಮನ ಬರುವುದು ಸಹಜ ಎಂದರು.