ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ರಾಸಾಯನಿಕ ಗೊಬ್ಬರಕ್ಕೆ ಮಾರುಹೋದ ಪರಿಣಾಮ ಆಧುನಿಕ ಕೃಷಿಯಲ್ಲಿ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲೂಕಿನ ಕಾನಹಳ್ಳಿಯಲ್ಲಿ ಕೃಷಿ ಇಲಾಖೆ ಸೋಮವಾರ ಆಯೋಜಿಸಿದ್ದ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಪರಿಕರಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಳುವರಿ ಕಡಿಮೆ ಎನ್ನುವ ಕಾರಣಕ್ಕೆ ಬಿಳಿಜೋಳ, ದೇಸಿ ಮೆಣಸಿನಕಾಯಿ, ಗಜ್ಜರಿ, ಬೀನ್ಸ್ ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ. ರೈತರು ದೇಸಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಗುಣಮಟ್ಟದ ಆಹಾರ-ಧಾನ್ಯಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಹಳೆಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ, ಕೃಷಿಯಿಂದ ನಷ್ಟ ಅನುಭವಿಸುವುದಿಲ್ಲ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಮಾತನಾಡಿ, ಅರಸೀಕೆರೆ ಹೋಬಳಿಯ ಹಿರೇಮೇಗಳಗೆರೆ, ಸತ್ತೂರು, ಚಿಗಟೇರಿಯ ಮೈದೂರು, ಬೆಣ್ಣಿಹಳ್ಳಿ, ಸಾಸ್ವಿಹಳ್ಳಿ, ಹಗರಿಗುಡಿಹಳ್ಳಿ, ಹರಪನಹಳ್ಳಿಯ ಕಾನಹಳ್ಳಿ, ಬಂಡ್ರಿ, ತೆಲಗಿ ಹೋಬಳಿಯ ಯಡಿಹಳ್ಳಿ, ಶಿರಾಗನಹಳ್ಳಿಯ ಒಟ್ಟು 1450 ಹೆಕ್ಟರ್ ಪ್ರದೇಶವನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಡಗಲಿ ಕೃಷಿ ವಿಸ್ತರಣಾ ಮುಖ್ಯಸ್ಥ ಮಂಜುನಾಥ ಬಾನುವಲಿ, ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಎನ್.ಎಚ್. ಸುನೀತ, ಉಪವಿಭಾಗದ ಕೃಷಿ ಉಪನಿರ್ದೇಶಕ ನಹೀಮ್ ಪಾಷ, ಮಾಡಲಗೇರೆ ಗ್ರಾ.ಪಂ. ಅಧ್ಯಕ್ಷೆ ಹೂಮ್ಲಿಬಾಯಿ, ಉಪಾಧ್ಯಕ್ಷೆ ಎಚ್.ಪಕ್ಕೀರಮ್ಮ, ಸದಸ್ಯರಾದ ನಿರ್ಮಲ, ಕೊಳಚಿ ನಾಗರಾಜ್, ಎಚ್.ಉಚ್ಚಂಗೆಪ್ಪ, ಬೀರಪ್ಪ, ಮನಾನ್ ಸಾಬ್, ಕೃಷಿ ಇಲಾಖೆಯ ನಾಗರಾಜ್, ದೇವೇಂದ್ರಗೌಡ ಇತರರಿದ್ದರು.