ಜನರಿಗೆ ತೊಂದರೆಯಾದರೆ ಜಿಲ್ಲಾಡಳಿತವೇ ಹೊಣೆ

0
video
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಕರ್ನಾಟಕದಲ್ಲಿ ಈ ಸಲ ಭಾರೀ ಪ್ರಮಾಣದ ಬರ ಇದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

Advertisement

ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶಿಸಿದರು.

ಅವರು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಿಂದ ವೀಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.

confarance

ಜನರಿಗೆ ತೊಂದರೆಯಾದರೆ ಆಯಾ ಜಿಲ್ಲೆಯ ಡಿಸಿ, ಎಸಿ ಮತ್ತು ತಹಸೀಲ್ದಾರರನ್ನು ಹೊಣೆಯಾಗಿಸುತ್ತೇನೆ. ಕುಡಿಯುವ ನೀರಿನ ಕೊರತೆ ಆಗಬಾರದು. ಜನ ಕೆಲಸ ಸಿಕ್ಕಿಲ್ಲ ಎಂದು ಗುಳೇ ಹೋಗಬಾರದು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು, ಸಿಇಓಗಳು ತಮ್ಮ ಜಿಲ್ಲೆಯ ತಹಸೀಲ್ದಾರ, ಆರ್.ಐ, ವಿ.ಎ ಮತ್ತು ಪಿಡಿಓಗಳೊಂದಿಗೆ ಸಭೆ ಜರುಗಿಸಬೇಕು. ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ದೇಶನ ನೀಡಿದರು.

ವಿಪತ್ತನ್ನು ಸಮರ್ಥವಾಗಿ ನಿರ್ವಹಿಸಲು ಜನರ ಸಹಕಾರ, ಅವರ ಪಾಲ್ಗೋಳ್ಳುವಿಕೆ ಮುಖ್ಯ. ಅದಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರದಂತೆ ಎಲ್ಲ ಜಿಲ್ಲೆಗಳಲ್ಲಿಯೂ ತಕ್ಷಣ ಜನರ ನೆರವಿಗೆ ಬರಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

ಬರಗಾಲ ಪರಿಸ್ಥಿಯಲ್ಲಿ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಖರ್ಚಿಗೆ ಈ ಯೋಜನೆಗಳಿಂದ ಸ್ವಲ್ಪ ಹಣ ಸಿಗುತ್ತಿದೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳಿಂದ 4-5 ಸಾವಿರ ಹಣ ಸಿಗುತ್ತಿದೆ. ರಾಜ್ಯದ 4.5 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ತಲುಪುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲೆಗಳಲ್ಲಿ ಸಮರ್ಥವಾಗಿ ವಿಪತ್ತು ನಿರ್ವಹಿಸಲು ಅಗತ್ಯದಷ್ಟು ಅನುದಾನವನ್ನು ಎಲ್ಲ ಡಿಸಿ, ತಹಸೀಲ್ದಾರರಿಗೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲು ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ ರೂ.2 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸಂವಾದದಲ್ಲಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿ.ಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಾನಗರಪಾಲಿಕೆ ಅಧೀಕ್ಷಕ ಇಂಜಿನಿಯರ್ ತಿಮ್ಮಪ್ಪ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್., ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಆರ್.ಎಂ. ಸೊಪ್ಪಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಬದ್ರಣ್ಣವರ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಶರಣಮ್ಮ ಜಂಗಿನ, ಕಾರ್ಯಪಾಲಕ ಇಂಜಿನಿಯರ್ ಎಂಎಂ. ನದಾಫ, ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಬಸವರಾಜ ಬಿಲ್ಲಕುಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, 2023ರ ಮುಂಗಾರು ವಿಫಲತೆ ಹಿನ್ನೆಲೆಯಲ್ಲಿ ಬೆಳೆ ಹಾನಿಗಾಗಿ ಸರಕಾರ ಪ್ರತಿ ರೈತನಿಗೆ ಬಿಡುಗಡೆ ಮಾಡಿರುವ 2 ಸಾವಿರ ರೂ. ಮಧ್ಯಂತರ ಪರಿಹಾರಧನ ಮಾರ್ಚ್ 5ರವರೆಗೆ ಧಾರವಾಡ ಜಿಲ್ಲೆಯ 1,01,584 ಜನ ರೈತರಿಗೆ ಒಟ್ಟು ರೂ.19.82 ಕೋಟಿ ಹಣ ಜಮೆ ಆಗಿದೆ. ಬಾಕಿ ಉಳಿದ ರೈತರಿಗೂ ಹಂತಹಂತವಾಗಿ ಬೆಳೆಹಾನಿ ಪರಿಹಾರಧನ ವಿತರಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here