ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರೂ ಸಹ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ತಹಸೀಲ್ದಾರರು ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಮೇವು ಹಾಗೂ ಬರ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸದ್ಯ 52 ಗ್ರಾಮಗಳಲ್ಲಿ 81 ಖಾಸಗಿ ಒಡೆತನದ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಧಾರವಾಡದಲ್ಲಿ 18 ಗ್ರಾಮಗಳಿಗೆ 26 ಕೊಳವೆ ಬಾವಿಗಳಿಂದ ಹಾಗೂ ಹುಬ್ಬಳ್ಳಿಯಲ್ಲಿ 5 ಗ್ರಾಮಗಳಿಗೆ 5 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಯಾವುದೇ ಗ್ರಾಮದಲ್ಲಿಯೂ ನೀರಿನ ಸಮಸ್ಯೆಯಾಗದಂತೆ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಎಲ್ಲಿಯಾದರೂ ಜಾನುವಾರು ಅಥವಾ ಮಳೆ ಹಾನಿಯಾದಲ್ಲಿ ತಹಸೀಲ್ದಾರರು ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ, ತಕ್ಷಣವೇ ಪರಿಹಾರ ನೀಡುವಂತೆ ಸೂಚಿಸಿದರು.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಅಪಾಯವಿರುವುದರಿಂದ ತಹಸೀಲ್ದಾರರು ತಕ್ಷಣ ಪರಿಶೀಲಿಸುವಂತೆ ತಿಳಿಸಿದರು.
ಅಲ್ಲದೇ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನೀರಿನ ಟ್ಯಾಂಕ್‌ಗೆ ಸಮರ್ಪಕವಾಗಿ ನೀರು ಪೂರೈಕೆಯಾಗದ ಕುರಿತು ಅಹವಾಲು ಕೇಳಿಬಂದಿದ್ದು, ಧಾರವಾಡ ತಹಸೀಲ್ದಾರ ತಕ್ಷಣವೇ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯಿಲ್ಲ. ಈಗಾಗಲೇ 62,463 ಮೆಟ್ರಿಕ್ ಟನ್ ಮೇವು ಸಂಗ್ರಹವಿದ್ದು ರೈತರಿಗಾಗಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದರು. ಮಲಪ್ರಭಾ ಬಲದಂಡೆ ಕಾಲುವೆಯಿಂದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳದ 58 ಕೆರೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಬಹುತೇಕ ಕಡೆ ಕೆರೆಗಳು ಭರ್ತಿಯಾಗುತ್ತಿವೆ. ಈ ಬಗ್ಗೆ ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಬೇಕು. ನೀರು ಎಲ್ಲಿಯೂ ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ, ನಿಗಾ ವಹಿಸಬೇಕೆಂದರು. ಮೇ 23ಕ್ಕೆ ನೀರು ಸರಬರಾಜು ಸ್ಥಗಿತಗೊಂಡು ಮುಂದೆ ಗದಗ ಜಿಲ್ಲೆಗೆ ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕೆಂದು ನಗರ ನೀರು ಸರಬರಾಜು ಮಂಡಳಿ ಮುಖ್ಯ ಇಂಜಿನಿಯರರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು ಉಪಸ್ಥಿತರಿದ್ದರು.
ಜಿಲ್ಲೆಗೆ ಈಗಾಗಲೇ ಒಟ್ಟು 108.12 ಕೋಟಿ ರೂ ಬರ ಪರಿಹಾರ ಅನುದಾನ ಬಿಡುಗಡೆಯಾಗಿದೆ. ವಿವಿಧ ತಾಂತ್ರಿಕ ಕಾರಣಗಳಿಂದ ಎಲ್ಲ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮೆ ಆಗದಿರುವ ಬಗ್ಗೆ ತಹಸೀಲ್ದಾರರು ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಫ್ರುಟ್ಸ್ಐಡಿ, ಆಧಾರ್ ಲಿಂಕ್, ಡಿಲಿಶನ್ ಪ್ರಕರಣ, ಮಿಸ್‌ಮ್ಯಾಚ್ ಪ್ರಕರಣ, ಶಿಫ್ಟೆಡ್ ಪ್ರಕರಣ, ನಾಟ್ ಟ್ರೇಸಿಯೇಬಲ್ ಪ್ರಕರಣ, ಡೆತ್ ಪ್ರಕರಣಗಳಲ್ಲಿಯೂ ನ್ಯೂನತೆಗಳನ್ನು ತಹಸೀಲ್ದಾರರು ಆದ್ಯತೆ ಮೇರೆಗೆ ಸರಿಪಡಿಸಿಕೊಳ್ಳಬೇಕು. ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳಿಂದ ತ್ವರಿತಗತಿಯಲ್ಲಿ ಬರ ಪರಿಹಾರ ಕಾರ್ಯ ಸರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
Advertisement