ವಿಜಯಸಾಕ್ಷಿ ಸುದ್ದಿ, ಧಾರವಾಡ : ಈಗ ರೈತರು ಸಂಕಷ್ಟದಲ್ಲಿದ್ದು, ಅನಗತ್ಯವಾಗಿ ಕೆಲವು ಬ್ಯಾಂಕ್‌ಗಳು ಬೆಳೆಸಾಲ ನೀಡಲು ರೈತರಿಗೆ ಸಿಬಿಲ್ ರೇಟ್ ಕಡ್ಡಾಯ ಮಾಡುತ್ತಿವೆ. ಇದರಿಂದ ರೈತರಿಗೆ ಮತ್ತು ರೈತರು ಉತ್ಪಾದಿಸುವ ಆಹಾರದ ಮೇಲೆ ನೇರ ಪ್ರಭಾವ ಬೀರುತ್ತದೆ. ಬ್ಯಾಂಕರ್ಸ್ಗಳು ಅನ್ವಯವಾಗದ ಕಾಯ್ದೆ, ನಿಯಮಗಳನ್ನು ಹೇಳಿ ರೈತರಿಗೆ ಬೆಳೆ ಸಾಲ ನೀಡುವಲ್ಲಿ ವಿನಾಕಾರಣ ತೊಂದರೆ ಕೊಡಬಾರದು. ಯಾವುದೇ ತಕರಾರು ಇಲ್ಲದೆ ರೈತರಿಗೆ ರೂ.10 ಲಕ್ಷವರೆಗೆ ಬೆಳೆಸಾಲ ನೀಡಲು ಆರ್.ಬಿ.ಐ ಮಾರ್ಗಸೂಚಿಗಳಿವೆ. ಇದನ್ನು ಬ್ಯಾಂಕರ್ಸ್ಗಳು ಪಾಲನೆ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿಚಾರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.
ಅವರು ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಮಾತನಾಡಿ, ಕೃಷಿ ಬೆಳೆಸಾಲವು ಜೂನ್ 2024ರ ಅಂತ್ಯಕ್ಕೆ 610.8 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024ರ ಅಂತ್ಯಕ್ಕೆ 650.34 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಮತ್ತು ಶೇ.104.47ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ.
ಕೃಷಿ ಅವಧಿ ಸಾಲವು ಜೂನ್ 2024ರ ಅಂತ್ಯಕ್ಕೆ 615.66 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024ರ ಅಂತ್ಯಕ್ಕೆ 641.57 ಕೋ.ರೂಗಳಷ್ಟು ಸಾಧನೆಯಾಗಿದೆ. ಶೇ. 104.18ರಷ್ಟು ತ್ರೈಮಾಸಿಕ ಗುರಿಗೆ ಸಾಧನೆಯಾಗಿದೆ. ಸೂಕ್ಷ್ಮ, ಸಣ್ಣ, ಹಾಗೂ ಮಧ್ಯಮ ಉದ್ಯಮಗಳು ಜೂನ್ 2024ರ ಅಂತ್ಯಕ್ಕೆ 2357.81 ಕೋ.ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024ರ ಅಂತ್ಯಕ್ಕೆ 3312.98 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಶೇ.140.51ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ.
ಇತರೆ ಆದ್ಯತಾ ವಲಯದಲ್ಲಿ ಜೂನ್ 2024ರ ಅಂತ್ಯಕ್ಕೆ 180.23 ಕೋಟಿ.ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024ರ ಅಂತ್ಯಕ್ಕೆ 147.8 ಕೋಟಿ.ರೂ. ಗಳಷ್ಟು ಸಾಧನೆಯಾಗಿದೆ. ಮತ್ತು ಶೇ 82.01ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ.
ಒಟ್ಟಾರೆಯಾಗಿ ಜೂನ್ 2024ರ ಅಂತ್ಯಕ್ಕೆ 5593.26 ಕೋಟಿ ರೂ.ಗಳ ಗುರಿಯನ್ನು ಹೊಂದಿದ್ದು, 2024ರ ಅಂತ್ಯಕ್ಕೆ 7453.82 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. 133.26 ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ ಎಂದು ವಿವರಣೆ ನೀಡಿದರು.
ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಆರ್.ಬಿ.ಐ ಜಿಲ್ಲಾ ಅಗ್ರಣೀಯ ಅಧಿಕಾರಿ ಅರುಣಕುಮಾರ, ಬ್ಯಾಂಕ್ ಆಫ್ ಬರೋಡಾದ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಪಾಟೀಲ, ನಬಾರ್ಡ್ ಎಜಿಎಮ್ ಮಯೂರ ಕಾಂಬ್ಳೆ ಮಾತನಾಡಿದರು.
ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರಭುದೇವ ಎನ್.ಜಿ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ವಿವಿಧ ಬ್ಯಾಂಕ್‌ಗಳ ಪ್ರಾದೇಶಿಕ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ರೈತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರ ಸರಕಾರದಿಂದ ಸಮುದಾಯ ಮತ್ತು ವ್ಯಕ್ತಿಗತ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರಕಾರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಬ್ಯಾಂಕಗಳು ನಿಗದಿತ ಗುರಿಗೆ ಅನುಗುಣವಾಗಿ ಸಾಲ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.