ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಪ್ರಕಾಶನದ ಮೂಲಕ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡುವ ಜೊತೆಗೆ ಸಾಹಿತ್ಯ ಸಂಘಟನೆ, ಯುವ ಬರಹಗಾರರಿಗೆ ಉತ್ತೇಜನ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕೃತ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕವಿ ಮಕಾನದಾರ ಅವರ ಮೂರುವರೆ ದಶಕದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗದಗ ಜಿಲ್ಲಾಡಳಿತದ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಗೌರವ ಸಮ್ಮಾನ ಜರುಗಲಿದೆ.
ಮಕಾನದಾರ ಅವರ ಅನೇಕ ಕೃತಿಗಳು ಕೊಂಕಣಿ, ಹಿಂದಿ, ತಮಿಳು, ತೆಲುಗು, ಬ್ಯಾರಿ, ಮಲಯಾಳಂ, ಇಂಗ್ಲಿಷ್, ದೇವನಾಗರಿ ಲಿಪಿ ಭಾಷೆಗಳಿಗೆ ಅನುವಾದಗೊಂಡಿದ್ದು, ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವವಿದ್ಯಾಲಯ, ಅಹಲ್ಯಾಬಾಯಿ ಹೋಳ್ಕರ್ ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಈ ಮೊದಲು ಕುವೆಂಪು ವಿಶ್ವವಿದ್ಯಾನಿಲಯಗಳ ಪಠ್ಯಗಳಲ್ಲಿ ಮಕಾನದಾರರ ಕವಿತೆ, ಗಜಲ್‌ಗಳು ಪಠ್ಯಪುಸ್ತಕಗಳಾಗಿವೆ.
ಸೂಫಿ ಸಾಹಿತ್ಯದ ಮೇರು ಕೃತಿ ವಿಶ್ವಭ್ರಾತೃತ್ವದ ಸೂಫಿ ದೂದ್ ಪೀರ, ಅಕ್ಕಡಿ ಸಾಲು, ಪ್ಯಾರಿ ಪದ್ಯ, ಮುತ್ತಿನ ತೆನೆ ಮುಂತಾದ ಮಹತ್ವದ ಸಂಕಲನಗಳು ವಿಶ್ವದ ಪ್ರತಿಷ್ಠಿತ ಗ್ರಂಥಾಲಯವಾದ ಅಮೇರಿಕಾದ ಕಾಂಗ್ರೆಸ್ ಆಫ್ ಲೈಬ್ರರಿಯ ವೆಬ್ ಲಿಂಕ್‌ನಲ್ಲಿ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


