ಬೆಂಗಳೂರು: ಲೈಂಗಿಕವಾಗಿ ಬಳಸಿಕೊಂಡು ಯುವತಿಗೆ ಮೋಸ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ
ಅತ್ಯಾಚಾರ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಸಹಾಯಕ ಉಪನಿರೀಕ್ಷಕರನ್ನೂ (ಎಎಸ್ಐ) ಅಮಾನತು ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆಯುಕ್ತರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಇನ್ಸ್‌ಪೆಕ್ಟರ್ ಹಾಗೂ ಎಎಸ್ಐ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ತಕ್ಷಣದ ಪರಿಣಾಮದಿಂದ ಅಮಾನತು ಮಾಡಲಾಗಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ,” ಎಂದು ಮಾಹಿತಿ ನೀಡಿದರು.
ಪ್ರಕರಣವೊಂದರ ವಿಚಾರಕ್ಕೆ ಠಾಣೆಗೆ ತೆರಳಿದ್ದ ಮಹಿಳೆಯೊಂದಿಗೆ ಸುನೀಲ್ ಪರಿಚಯ ಬೆಳೆಸಿಕೊಂಡಿದ್ದರು. ಸಹಾಯ ಮಾಡುವ ನೆಪದಲ್ಲಿ ಆಕೆಯ ಮೊಬೈಲ್ ನಂಬರ್ ಪಡೆದು ವಾಟ್ಸಪ್ ಮೂಲಕ ಸಂಪರ್ಕ ಮುಂದುವರಿಸಿಕೊಂಡು, ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿ ಸುಮಾರು ಒಂದು ವರ್ಷದಲ್ಲಿ ಮೂರು ಬಾರಿ ಲೈಂಗಿಕ ಶೋಷಣೆ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಅಲ್ಲದೇ ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನು ಸಂಗ್ರಹಿಸಿಕೊಂಡು, “ಈ ವಿಚಾರ ಯಾರಿಗೂ ಹೇಳಿದರೆ ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದು, ನ್ಯಾಯಕ್ಕಾಗಿ ಪೊಲೀಸ್ ಮಹಾನಿರ್ದೇಶಕರನ್ನು ಸಂಪರ್ಕಿಸಿದ್ದಾರೆ.



