ಬೆಂಗಳೂರು: ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರನ್ನು ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿದ್ದರು. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಸರದಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಮನೆಗೆ ಸಿಎಂ ಸಿದ್ದರಾಮಯ್ಯರನ್ನು ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿದ್ದಾರೆ.
ಮಂಗಳವಾರ ಬೆಳಗ್ಗೆ 9.30ಕ್ಕೆ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಖಾಸಗಿ ನಿವಾಸದಲ್ಲಿ ಸಿದ್ದರಾಮಯ್ಯ ‘ಬ್ರೇಕ್‌ಫಾಸ್ಟ್ ಮೀಟಿಂಗ್’ಗಾಗಿ ಹಾಜರಾಗಲಿದ್ದಾರೆ.
ಅಧಿಕಾರ ಹಂಚಿಕೆ ತಿಕ್ಕಾಟದ ಅಂತಿಮ ನಿರ್ಧಾರ ಈಗ ಹೈಕಮಾಂಡ್ ಅಂಗಳ ತಲುಪಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದ್ದು, ಪರಿಹಾರ ಸೂಚಿಸುವಂತೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು ತುಸು ಮಟ್ಟಿಗೆ ಶಮನಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಖರ್ಗೆ ಕರ್ನಾಟಕದವರೇ ಆಗಿರುವುದರಿಂದ ಯಾವುದೇ ಏಕಪಕ್ಷೀಯ ಅಥವಾ ಪಕ್ಷಪಾತ ನಿರ್ಧಾರವಾಗಿ ಹೋಗದಂತೆ ನೋಡಿಕೊಳ್ಳಲು ಎಲ್ಲ ಉನ್ನತ ಮಟ್ಟದ ನಾಯಕರನ್ನು ಜತೆ ಕರೆದು ಚರ್ಚಿಸಲು ಮುಂದಾಗಿದ್ದಾರೆ.



