ರಾಮನಗರ: ಕರ್ನಾಟಕ ಕಾಂಗ್ರೆಸ್ ನಾಯಕತ್ವದ ವಿಚಾರ ದಿನಕ್ಕೊಂದು ಮಹತ್ವ ಪಡೆದುಕೊಳ್ಳುತ್ತಿದೆ. ನಾಯಕರು ಒಳಗೊಳಗೆ ತಂತ್ರ ಪ್ರತಿತಂತ್ರ ಹೆಣೆಯುತ್ತಲೇ ಇದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್ ಪಡೆ ದೆಹಲಿಗೆ ತೆರಳುತ್ತಿದ್ದು, ವೋಟ್ ಚೋರಿ ಅಭಿಯಾನದ ಜೊತೆಗೆ ಕುರ್ಚಿ ಚರ್ಚೆಯೂ ನಡೆಯಲಿದೆಯಾ ಎಂಬ ಸಂಶಯ ಮೂಡಿದೆ. ಇದರ ನಡುವೆ ಜನವರಿ 6ಕ್ಕೆ ಡಿಕೆ ಶಿವಕುಮಾರ್ ಅವರಿಗೆ ಪಟ್ಟಾಭಿಷೇಕವಾಗಲಿದೆ ಎಂದು ಡಿಸಿಎಂ ಆಪ್ತ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಜ.6 ಮತ್ತು ಜ. 9 ಅದೃಷ್ಟ ಸಂಖ್ಯೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ನಾಳೆ ನಾನು ಡಿಕೆಶಿವಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗಿ ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ದೆಹಲಿ ಭೇಟಿ ಸಮಯದಲ್ಲಿ ನಾವು ಯಾವುದೇ ವರಿಷ್ಠರನ್ನ ಭೇಟಿ ಮಾಡುವುದಿಲ್ಲ. ಈಗಾಗಲೇ ನಮ್ಮ ಮನವಿಯನ್ನ ವರಿಷ್ಠರಿಗೆ ತಿಳಿಸಿದ್ದು ಸ್ಪಂದನೆ ಸಿಗುವ ವಿಶ್ವಾಸವಿದೆ. ಶೀಘ್ರವಾಗಿ ತೀರ್ಮಾನ ತೆಗದುಕೊಳ್ಳುತ್ತಾರೆ ಎಂದು ಹೇಳಿದರು.
ಮತಗಳ್ಳತನ ಎಂಬ ಆರೋಪ ಕರ್ನಾಟಕದಿಂದಲೇ ಸಿಡಿದಿತ್ತು. ಈ ಅದೀಗ ದೆಹಲಿಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಯೇ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇದಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಠಿಕಾಣಿ ಹೂಡಲು ಡಿಕೆ ಶಿವಕುಮಾರ್ ಸಹ ಸಜ್ಜಾಗಿದ್ದಾರೆ.



