ಬೆಂಗಳೂರು:- ಅಣ್ಣನನ್ನು ಸಿಎಂ ಸ್ಥಾನದಲ್ಲಿ ನೋಡುವ ಆಸೆಯಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು. ಸಹೋದರನ ರಾಜಕೀಯ ಭವಿಷ್ಯ ಬದಲಾಗಲಿದೆ ಹಾಗೂ ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ,
ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷದ ಏಳಿಗೆಗೆ, ಘನತೆಗೆ ಚ್ಯುತಿ ಬರದಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು.
ಪಕ್ಷನಿಷ್ಠರಾಗಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಅವರು ಗಮನ ಹರಿಸುತ್ತಿಲ್ಲವಲ್ಲ ಎಂದು ಕೇಳಿದಾಗ, ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ ಎಂದು ಹೇಳಿದರು. ನವೆಂಬರ್ 15 ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರು, ಎಐಸಿಸಿ ನಾಯಕರಿಗೆ ಕೇಳಬೇಕು ಎಂದು ತಿಳಿಸಿದರು.



