ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದರೂ, ಯಾವುದೇ ಪ್ರಮುಖ ಭೇಟಿಯಿಲ್ಲದೇ ಬರಿಗೈಯಲ್ಲಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಭಾನುವಾರ ಸಂಜೆ ಡಿಕೆಶಿ ದೆಹಲಿಗೆ ತೆರಳಿದ್ದರು. ಅವರು ಹೈಕಮಾಂಡ್ ನಾಯಕರನ್ನು, ವಿಶೇಷವಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಲು ಅವಕಾಶ ಕೇಳಿದ್ದರು.
ಇಂದು ಬೆಳಿಗ್ಗೆ 10ರಿಂದ 11ರ ನಡುವೆ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಹೈಕಮಾಂಡ್ ನಾಯಕರಿಂದ ಭೇಟಿಗೆ ಅವಕಾಶ ಸಿಗದೆ, ಡಿಕೆಶಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಡಿಕೆಶಿ ಮೂರು ಗಂಟೆಯ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, “ನಾನು ನಿಯಮಿತವಾಗಿ ದೆಹಲಿಗೆ ಕೆಲಸ ಇದ್ದಾಗ ಹೋಗುತ್ತಿರುತ್ತೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು, ವಿಶ್ರಾಂತಿ ಪಡೆಯಲು, ಶಾಪಿಂಗ್ ಮಾಡಲು ಮತ್ತು ನ್ಯಾಯಾಲಯದ ವಿಚಾರಣೆಗಳಿಗೂ ಹೋಗುತ್ತೇನೆ ಎಂದು ತಿಳಿಸಿದ್ದರು.



