ಕೊಪ್ಪಳ: 2028ರ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಮುಂದುವರಿಯಲಿದೆ. ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ನ ಹಿರಿಯ ನಾಯಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವುದು ಸಹಜ. ಪ್ರತಿಯೊಬ್ಬ ಹಿರಿಯ ನಾಯಕನಿಗೂ ತನ್ನ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ 2028ರಲ್ಲೂ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್ ಅವರದ್ದೇ ಎಂದು ತಂಗಡಗಿ ಹೇಳಿದ್ದಾರೆ.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಸಚಿವ ಸ್ಥಾನದ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಹಿಟ್ನಾಳ್ ಮುಂದಿನ ದಿನಗಳಲ್ಲಿ ಸಚಿವರಾಗುವ ವಿಶ್ವಾಸವಿದೆ ಎಂದರು. ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ಯಾವುದೇ ಅಸಮಾಧಾನ ಅಥವಾ ಮುನಿಸಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡ ತಂಗಡಗಿ, ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಗ್ಯಾರಂಟಿ ಮಾದರಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದ ಅವರು, ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳುವಂತೆ ಬಿಜೆಪಿಗೆ ಸಲಹೆ ನೀಡಿದರು.
ಅಶೋಕ್, ಸುನೀಲ್ ಕುಮಾರ್ ಹಾಗೂ ಸಿ.ಟಿ. ರವಿ ಅವರ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂದು ಆರೋಪಿಸಿದ ತಂಗಡಗಿ, ಬಿಜೆಪಿ ತನ್ನದೇ ಪಕ್ಷದ ಸಮಸ್ಯೆಗಳನ್ನು ಸರಿಪಡಿಸಿಕೊಂಡ ಬಳಿಕ ಕಾಂಗ್ರೆಸ್ ಕುರಿತು ಮಾತನಾಡಲಿ ಎಂದು ತಿರುಗೇಟು ನೀಡಿದರು.



