ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಮಾ.25ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಅವರು ಗುರುವಾರ ಶಿಕ್ಷಣ ಇಲಾಖೆ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಪರೀಕ್ಷಾ ಅಧೀಕ್ಷಕರು ಮತ್ತು ಪರೀಕ್ಷಾ ನಿರ್ವಹಣಾ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಗಾಧಿಕಾರಿಗಳು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯನ್ನು ತಲುಪಿಸಬೇಕು.
ಆರೋಗ್ಯ ಸಿಬ್ಬಂದಿಯು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಡಿಪೋ ಮ್ಯಾನೇಜರ್‌ಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಸಮರ್ಪಕ ಬೆಂಚ್ ಪೂರೈಸಬೇಕು ಎಂದರಲ್ಲದೆ, ಪರೀಕ್ಷಾ ಸಮಯದಲ್ಲಿ ವಿದ್ಯುತ್ ನಿಲುಗಡೆ ಆಗದಂತೆ ಹೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಸೋಮವಾರ ಶಿರಹಟ್ಟಿ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ಓಕುಳಿ (ಬಣ್ಣ ಎರಚುವದು) ಇರುವದರಿಂದ ಅಂದು ಮುಂಜಾನೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕೆಂದು ತಹಸೀಲ್ದಾರ ಅನಿಲ ಬಡಿಗೇರ ಪೊಲೀಸ್ ಸಿಬ್ಬಂದಿಗೆ ಮೊಬೈಲ್ ಮೂಲಕ ಸೂಚನೆ ನೀಡಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತರಾವ್ ಎಂ.ವಿ. ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿರ್ಭೀತಿಯಿಂದ ತೆರಳಬೇಕು. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರವನ್ನು ತೋರಿಸಿ ಬಸ್‌ನಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಯಾದ ಎಲ್ಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿ ಪರೀಕ್ಷೆಯ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿಸಬೇಕೆಂದು ಹೇಳಿದರು.
ಯು.ಜಿ. ಹುಚ್ಚಯ್ಯನಮಠ, ಹರೀಶ ಎಸ್, ತಾ.ಪಂ ಸಹಾಯಕ ನಿರ್ದೆಶಕ ಎಸ್.ಕೆ. ವಾಲಿ, ಯೋಜನಾಧಿಕಾರಿ ಎಚ್.ಎ. ಕೊಂಡಿಕೊಪ್ಪ, ಆರ್.ಎಫ್. ಬಟಗುರ್ಕಿ, ಎಚ್.ಟಿ. ಬಿಜ್ಜೂರ, ಶ್ರೀನಿವಾಸ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಮಾತನಾಡಿ, ಶಿರಹಟ್ಟಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳು ಬರಲಿದ್ದು, ಇದಕ್ಕಾಗಿ 166 ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 1329 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಫಲಿತಾಂಶ ಸುಧಾರಣೆಗೆ ಈಗಾಗಲೇ ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲೇ ಹೆಚ್ಚು ಫಲಿತಾಂಶ ಗಳಿಸಲಾಗಿತ್ತು. ಅದನ್ನೇ ಈ ಬಾರಿಯೂ ಸಹ ಮುಂದುವರೆಸಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ ಎಂದರು.