ಚಳಿಗಾಲ ಪ್ರಾರಂಭವಾದಂತೆ ಮಾರುಕಟ್ಟೆಯಲ್ಲಿ ಹಲವು ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ವಿಶೇಷ ಗಮನಸೆಳೆಯುವ ಹಣ್ಣು ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್. ಧಾರೆಹುಳಿ, ಕರಂಬಳ, ಕರಂಬೋಲಾ, ಕರಬಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಲ್ಪಡುವ ಈ ಹಣ್ಣು ಆಕ್ಷೀಡೇಸಿಯೇ ಕುಟುಂಬಕ್ಕೆ ಸೇರಿದ್ದು,
ಇದರ ವೈಜ್ಞಾನಿಕ ಹೆಸರು ಅವೆರೋ ಕ್ಯಾರಂಬೋಲ, ರುಚಿಗರವಾಗಿರುವ ಈ ಹಣ್ಣು ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿ. ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವುದರಿಂದ ಪೌಷ್ಟಿಕ ತಜ್ಞರು ಇದನ್ನು ಚಳಿಗಾಲದಲ್ಲಿ ಸೇವನೆಗೆ ಸೂಕ್ತವೆಂದು ಹೇಳುತ್ತಾರೆ.
ವಿಟಮಿನ್‌ಗಳಿಂದ ಸಮೃದ್ಧ
ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ B6 ದೇಹದ ಚಯಾಪಚಯ ಕ್ರಿಯೆಯನ್ನು (ಮೆಟಾಬೊಲಿಸಂ) ವೇಗಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಕ್ಯಾಲೊರಿಗಳು ಬೇಗ ಕರಗುತ್ತವೆ ಮತ್ತು ದೇಹದ ಕೊಬ್ಬು ಕಡಿಮೆಯಾಗುತ್ತದೆ.
ಈ ಹಣ್ಣಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ C ಕೂಡ ಲಭ್ಯವಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಋತುಮಾನ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಕೆಮ್ಮು, ಜಲಜ್ವರ ಸಮಸ್ಯೆಗಳಿಂದಲೂ ತ್ವರಿತ ಪರಿಹಾರ ಸಿಗುತ್ತದೆ. ವಿಟಮಿನ್ C ಚರ್ಮದ ಆರೋಗ್ಯವನ್ನು ಕಾಪಾಡಿ ಚರ್ಮ ಒಡೆಯುವುದನ್ನು ತಡೆಯುವ ಸಾಮರ್ಥ್ಯವೂ ಹೊಂದಿದೆ.
ಜೀರ್ಣಕ್ರಿಯೆ ಸುಧಾರಣೆ
100 ಗ್ರಾಂ ಸ್ಟಾರ್ ಫ್ರೂಟ್‌ನಲ್ಲಿ ಸುಮಾರು 2.8 ಗ್ರಾಂ ಫೈಬರ್ ಇರುವುದರಿಂದ ಜೀರ್ಣಾಂಗದ ಕಾರ್ಯ ಸುಧಾರಿಸುತ್ತದೆ. ಗ್ಯಾಸ್ಟ್, ಆಸಿಡ್ ಸಮಸ್ಯೆಗಳನ್ನು ಕಡಿಮೆ ಮಾಡಿ ಮಲಬದ್ಧತೆಯಿಂದ ಪರಿಹಾರ ಒದಗಿಸುತ್ತದೆ.
ನರಮಂಡಲಕ್ಕೆ ಸಹಾಯಕ
ಸ್ಟಾರ್ ಫ್ರೂಟ್‌ನಲ್ಲಿರುವ ಪೋಷಕಾಂಶಗಳು ನರಮಂಡಲದ ಕಾರ್ಯವನ್ನು ಬಲಪಡಿಸುತ್ತವೆ. ನರಗಳ ದೌರ್ಬಲ್ಯ ಕಡಿಮೆಯಾಗುವುದರೊಂದಿಗೆ ಕುತ್ತಿಗೆ ಮತ್ತು ಭುಜದ ನೋವು ನಿವಾರಣೆಗೆ ಸಹಾಯಪಡುತ್ತದೆ.
ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಮಿತ್ರ
ವಿಟಮಿನ್ A ಸಮೃದ್ಧವಾಗಿರುವುದರಿಂದ ಕಣ್ಣುಗಳ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ದೃಷ್ಟಿ ಸುಧಾರಿಸಲು ಸಹಕಾರಿ. ನಿಯಮಿತ ಸೇವನೆಯಿಂದ ಕಣ್ಣಿನ ಪೊರೆಯ ಸಮಸ್ಯೆಗಳಿಂದ ದೂರ ಇರಬಹುದು. ಇದಲ್ಲದೆ, ವಿಟಮಿನ್ B6 ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಚಳಿಗಾಲದಲ್ಲಿ ಸುಲಭವಾಗಿ ಲಭ್ಯವಾಗುವ ಈ ಸ್ಟಾರ್ ಫ್ರೂಟ್, ರುಚಿಯ ಜೊತೆಗೆ ಆರೋಗ್ಯಕ್ಕೂ ನಕ್ಷತ್ರದಂತೆ ಬೆಳಕು ನೀಡುವ ಹಣ್ಣಾಗಿ ಪರಿಣಮಿಸಿದೆ.



