ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 52 ರನ್ಗಳ ಜಯಭೇರಿ ಬಾರಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ 87 ರನ್ ಬಾರಿಸಿದರೆ, ಸ್ಮೃತಿ ಮಂಧಾನ 45 ರನ್ ಸಿಡಿಸಿದರು. ಇನ್ನು ದೀಪ್ತಿ ಶರ್ಮಾ 58 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು.
299 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಲಾರಾ ವೋಲ್ವಾರ್ಡ್ 101 ರನ್ ಬಾರಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ಪಡೆ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಚೊಚ್ಚಲ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಟೀಮ್ ಇಂಡಿಯಾ ಕೇವಲ ವಿಶ್ವ ಚಾಂಪಿಯನ್ ಆದದ್ದು ಮಾತ್ರವಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಬಹುಮಾನದ ಹಣವನ್ನು ಗೆದ್ದುಕೊಂಡಿದೆ. ಮೊದಲ ವಿಶ್ವಕಪ್ ಗೆಲುವಿನ ಜೊತೆಗೆ ಭಾರತ ತಂಡಕ್ಕೆ 39.78 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಬಹುಮಾನದ ಮೊತ್ತವಾಗಿದೆ. ಎರಡನೇ ಸ್ಥಾನ ಪಡೆದ ದಕ್ಷಿಣ ಆಫ್ರಿಕಾಗೆ 19.88 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.
ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ತಲಾ 9.94 ಕೋಟಿ ರೂಪಾಯಿ ಸಿಗಲಿದೆ. ಅಷ್ಟೇ ಅಲ್ಲ, ಬಿಸಿಸಿಐ ಕಡೆಯಿಂದಲೂ ಭಾರತ ತಂಡಕ್ಕೆ ದೊಡ್ಡ ಬಹುಮಾನದ ಮೊತ್ತ ಸಿಕ್ಕಿದೆ.ಬಿಸಿಸಿಐ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಪುರುಷರ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ನೀಡಿತ್ತು.
ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಮುನ್ನ ಬಹುಮಾನ ಘೋಷಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಬಹುಮಾನದ ಮೊತ್ತವನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಗೆಲುವಿನ ನಂತರ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹುಮಾನದ ಮೊತ್ತವನ್ನು ಘೋಷಿಸಿದರು.


