ಬೀದರ್: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ ನಡೆಸಿದ್ದೇವೆಂದು ಹೇಳಿ ಹಣ ವಸೂಲಿ ಮಾಡಿದ ಗಂಭೀರ ಆರೋಪವೊಂದು ಬೀದರ್ ತಾಲೂಕಿನ ಮನ್ನಾಖೇಳಿ ಗ್ರಾಮದ ಸೇಡಂಕರ್ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.
ಬಸಲಾಪುರ ಗ್ರಾಮದ ಪ್ರಜ್ವಲ್ ಎಂಬ ಯುವಕ ಅಪಘಾತದಲ್ಲಿ ಭುಜದ ಎಲುಬು ಮುರಿದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಿ ಎಲುಬಿಗೆ ರಾಡ್ ಹಾಕಬೇಕು ಎಂದು ವೈದ್ಯರು ತಿಳಿಸಿ 37 ಸಾವಿರ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ನಿಜವಾಗಿ ಯಾವುದೇ ಆಪರೇಷನ್ ನಡೆದಿಲ್ಲ, ಕೇವಲ ಬ್ಯಾಂಡೇಜ್ ಹಾಕಲಾಗಿದೆ ಎಂದು ಕುಟುಂಬ ಆರೋಪಿಸಿದೆ. ನಂತರವೂ ನೋವು ಮುಂದುವರಿದ ಕಾರಣ ಸ್ಕ್ಯಾನಿಂಗ್ ಮಾಡಿಸಿದಾಗ, ಎಲುಬು ಮುರಿದ ಸ್ಥಿತಿಯಲ್ಲೇ ಇರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಹಣಕಾಸು ಅಕ್ರಮದ ಆರೋಪಗಳಿಗೆ ಕಾರಣವಾಗಿದ್ದು, ಸ್ಥಳೀಯ ಮಟ್ಟದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.



