ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ದರ್ಶನ್ ಆರು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲೇ ಕಳೆದಿದ್ದಾರೆ. ಜೈಲಿನಲ್ಲಿದ್ದಾಗ ವಿಪರೀತ ಬೆನ್ನು ನೋವು ಸಮಸ್ಯೆ ಎದುರಿಸಿದ ದರ್ಶನ್, ಅದನ್ನೇ ಕಾರಣವಾಗಿ ನೀಡಿ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಹ ಪಡೆದಿದ್ದರು.
ಆ ಬಳಿಕ ಹೈಕೋರ್ಟ್ನಲ್ಲಿ ಅವರಿಗೆ ನಿಯಮಿತ ಜಾಮೀನು ಸಹ ದೊರೆಯಿತು. ಜಾಮೀನು ದೊರೆತ ಬಳಿಕ ಕೆಲ ವಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ದರ್ಶನ್ ನಿಧಾನಕ್ಕೆ ಮತ್ತೆ ಸಾರ್ವಜನಿಕ ಜೀವನದತ್ತ ಮರಳುತ್ತಿರುವಂತೆ ತೋರುತ್ತಿದೆ.
ಇದೀಗ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದುಪಡಿಸುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಇದರ ಬೆನ್ನಲ್ಲೇ ನಟ ದರ್ಶನ್ ಬಳಿಯಿದ್ದ ಗನ್ ಪರವಾನಗಿ ರದ್ದು ಮಾಡಲು ಪೊಲೀಸರು ನಿರ್ಧರಿಸಿ ನಟ ದರ್ಶನ್‌ಗೆ ನೋಟಿಸ್ ಕೊಟ್ಟಿದ್ದರು. ಪೊಲೀಸರ ನೋಟಿಸ್ ಗೆ ಉತ್ತರ ನೀಡಿರುವ ನಟ ದರ್ಶನ್, ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗೆ ಗನ್ ಬೇಕಾಗುತ್ತದೆ. ನನಗೆ ಗನ್ ಬೇಕು, ಪರವಾನಗಿ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನೀವು ಕೊಲೆ ಪ್ರಕರಣದ ಆರೋಪಿ ಆಗಿದ್ದೀರಿ, ಜಾಮೀನಿನ ಮೇಲೆ ಹೊರಗಿರುವ ಕಾರಣ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದುಪಡಿಸಬೇಕಾಗಿದೆ ಎಂದು ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರ ನೋಟಿಸ್ ಗೆ ನಟ ದರ್ಶನ್ ಪತ್ರದ ನಮೂಲಕ ಪ್ರತಿಕ್ರಿಯಿಸಿ, ಗನ್ ಪರವಾನಗಿ ರದ್ದುಪಡಿಸಬೇಡಿ ಎಂದು ಮನವಿ ಮಾಡಿದ್ದಾರೆ.