ಬೆಳಗಾವಿ:- ಹೈಕೋರ್ಟ್ ಆದೇಶದ ಬಳಿಕವೂ ಗುತ್ತಿಗೆದಾರನ ಬಿಲ್ ಕ್ಲಿಯರ್ ಮಾಡದ ಡಿಸಿ ಕಾರನ್ನು ಜಪ್ತಿ ಮಾಡಲಾಗಿದೆ.
ಎಸ್, ಬರೋಬ್ಬರಿ 30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ನೀಡಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಓಡಾಡ್ತಿದ್ದ ಕಾರು ಜಪ್ತಿ ಮಾಡಲಾಗಿದೆ. ದಿ.ನಾರಾಯಣ್ ಕಾಮತ್ ಎಂಬವರಿಗೆ ದೂದಗಂಗಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಕಾಮಗಾರಿಯೊಂದನ್ನ ಗುತ್ತಿಗೆ ನೀಡಲಾಗಿತ್ತು. 1992-93ರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಮುಗಿದು 2 ವರ್ಷ ಕಳೆದಿದ್ದರೂ ಬಿಲ್ ಪಾವತಿ ಆಗಿರಲಿಲ್ಲ. ಹೀಗಾಗಿ ಬಿಲ್‌ಗಾಗಿ 1995ರಲ್ಲಿ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವೇಳೆ ಬೆಳಗಾವಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 34 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿತ್ತು. ಸ್ಥಳೀಯ ಕೋರ್ಟ್ ಆದೇಶ ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ 2024ರ ಜೂನ್ ಒಳಗಾಗಿ ಗುತ್ತಿಗೆದಾರನಿಗೆ ಬಡ್ಡಿ ಸಮೇತ ಅರ್ಧ ಬಿಲ್ ಪಾವತಿ ಮಾಡುವಂತೆ ಹೈಕೋರ್ಟ್ ಕೂಡ ಸೂಚನೆ ನೀಡಿತ್ತು. ಹೈಕೋರ್ಟ್ ಆದೇಶ ಬಳಿಕವೂ ಬಾಕಿ ಬಿಲ್ ನೀಡಲು ವಿಫಲವಾದ ಹಿನ್ನೆಲೆ ಶುಕ್ರವಾರ ಡಿಸಿ ಕಾರು ಜಪ್ತಿ ಮಾಡಲಾಗಿದೆ.