ಮನೆಯ ಸದಸ್ಯರ ಒಟ್ಟಾರೆ ಆರೋಗ್ಯವು ಬಹುಮಟ್ಟಿಗೆ ಅಡುಗೆ ಮನೆಯ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆಗೆ ಬಳಸುವ ಆಹಾರ ಪದಾರ್ಥಗಳು, ಪಾತ್ರೆಗಳು, ನೀರು ಹಾಗೂ ಅಡುಗೆ ಮನೆಯ ಸ್ವಚ್ಛತೆ, ಇವುಗಳು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ. ವಿಶೇಷವಾಗಿ, ಪಾತ್ರೆಗಳನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಎಲ್ಲರೂ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆಯುತ್ತಾರೆ. ಆದರೆ ಪಾತ್ರೆ ತೊಳೆಯುವ ವೇಳೆ ನಾವು ಅರಿವಿಲ್ಲದೆ ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ತಪ್ಪುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೆಚ್ಚು ಡಿಟರ್ಜೆಂಟ್ ಬಳಸುವುದು
ಪಾತ್ರೆಗಳು ಚೆನ್ನಾಗಿ ಸ್ವಚ್ಛವಾಗಲು ಹೆಚ್ಚು ಡಿಟರ್ಜೆಂಟ್ ಬಳಸಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ತಪ್ಪು. ಹೆಚ್ಚು ಡಿಟರ್ಜೆಂಟ್ ಅಥವಾ ಲಿಕ್ವಿಡ್ ಬಳಸುವುದರಿಂದ ಪಾತ್ರೆಗಳ ಮೇಲೆ ರಾಸಾಯನಿಕ ಪದರ ಉಳಿಯುವ ಸಾಧ್ಯತೆ ಇದೆ. ಇದು ಆಹಾರಕ್ಕೆ ಸೇರಿಕೊಂಡರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ ಅಗತ್ಯವಿರುವಷ್ಟು ಪ್ರಮಾಣದ ಡಿಟರ್ಜೆಂಟ್ ಮಾತ್ರ ಬಳಸುವುದು ಉತ್ತಮ.
ಬಿಸಿನೀರಿನ ಅತಿಯಾದ ಬಳಕೆ
ಪಾತ್ರೆಗಳನ್ನು ಬೇಗನೆ ಸ್ವಚ್ಛಗೊಳಿಸಲು ಅನೇಕರು ಬಿಸಿನೀರನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಹಾಗೂ ನಾನ್-ಸ್ಟಿಕ್ ಪಾತ್ರೆಗಳನ್ನು ಬಿಸಿನೀರಿನಿಂದ ತೊಳೆಯುವುದು ಅಪಾಯಕಾರಿಯಾಗಿದೆ. ಬಿಸಿನೀರು ಪ್ಲಾಸ್ಟಿಕ್‌ನಿಂದ ಹಾನಿಕಾರಕ ಅಂಶಗಳನ್ನು ಹೊರಹಾಕಬಹುದು. ಜೊತೆಗೆ ನಾನ್-ಸ್ಟಿಕ್ ಪಾತ್ರೆಗಳ ಲೇಪನಕ್ಕೂ ಹಾನಿಯಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಸ್ಪಾಂಜ್ ಮತ್ತು ಸ್ಕ್ರಬ್ಬರ್‌ಗಳನ್ನು ಸ್ವಚ್ಛಗೊಳಿಸದಿರುವುದು
ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ ಮತ್ತು ಸ್ಕ್ರಬ್ಬರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇಂತಹ ಸ್ಪಾಂಜ್‌ಗಳಿಂದ ಪಾತ್ರೆ ತೊಳೆಯುವುದರಿಂದ ಪಾತ್ರೆಗಳು ಇನ್ನಷ್ಟು ಕಲುಷಿತಗೊಳ್ಳುತ್ತವೆ. ಆದ್ದರಿಂದ ಸ್ಪಾಂಜ್ ಅನ್ನು ವಾರಕ್ಕೊಮ್ಮೆ ಬದಲಾಯಿಸುವುದು ಮತ್ತು ಸ್ಕ್ರಬ್ಬರ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ ಸ್ವಚ್ಛಗೊಳಿಸುವುದು ಅಗತ್ಯ.
ನಾನ್-ಸ್ಟಿಕ್ ಪಾತ್ರೆಗಳಿಗೆ ಸ್ಟೀಲ್ ಸ್ಕ್ರಬ್ಬರ್ ಬಳಕೆ
ನಾನ್-ಸ್ಟಿಕ್ ಪಾತ್ರೆಗಳನ್ನು ತೊಳೆಯಲು ಸ್ಟೀಲ್ ಸ್ಕ್ರಬ್ಬರ್ ಬಳಸುವುದು ಮತ್ತೊಂದು ದೊಡ್ಡ ತಪ್ಪು. ಇದರಿಂದ ಪಾತ್ರೆಯ ಮೇಲಿನ ಲೇಪನ ಹಾನಿಯಾಗುತ್ತದೆ ಮತ್ತು ಹಾನಿಕಾರಕ ರಾಸಾಯನಿಕಗಳು ಹೊರಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾನ್-ಸ್ಟಿಕ್ ಪಾತ್ರೆಗಳನ್ನು ಸದಾ ಮೃದುವಾದ ಸ್ಪಾಂಜ್‌ನಿಂದಲೇ ತೊಳೆಯಬೇಕು.
ಪಾತ್ರೆಗಳನ್ನು ಸಿಂಕ್‌ನಲ್ಲಿ ಹೆಚ್ಚು ಹೊತ್ತು ಇಡುವುದು
ಕೊಳಕು ಪಾತ್ರೆಗಳನ್ನು ಸಿಂಕ್‌ನಲ್ಲಿ ಹೆಚ್ಚು ಸಮಯ ಇಡುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ ಹಾಗೂ ದುರ್ವಾಸನೆ ಬರುತ್ತದೆ. ಊಟ ಮಾಡಿದ ತಕ್ಷಣ ಪಾತ್ರೆಗಳನ್ನು ತೊಳೆಯುವುದರಿಂದ ಅಡುಗೆಮನೆ ಸ್ವಚ್ಛವಾಗಿರುತ್ತದೆ ಮತ್ತು ಆರೋಗ್ಯವೂ ಸುರಕ್ಷಿತವಾಗಿರುತ್ತದೆ.



