HomeGadag Newsವಚನ ಸಾಹಿತ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ವಚನ ಸಾಹಿತ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದಲ್ಲಿ ಕಲ್ಯಾಣ ನಾಡಿನಲ್ಲಿ ಅಸಂಖ್ಯಾತ ಶರಣರು ಲೋಕಕಲ್ಯಾಣ ಮಾರ್ಗವನ್ನು ಅನುಸರಿಸಿ ಮಿಂಚಿ ಮರೆಯಾದರು. ಆ ಶರಣರ ಅನೇಕ ವಚನಗಳು, ಅನೇಕ ಮಠಗಳಲ್ಲಿ, ಹಲವರ ಮನೆಗಳಲ್ಲಿ ಪೂಜೆಗೊಳ್ಳುತ್ತ ಕೇವಲ ಉತ್ಸವ ಮೂರ್ತಿಗಳಾಗಿದ್ದವು. ಅಂಥವುಗಳನ್ನು ಮೊದಲು ಕಂಡು ನೊಂದವರು ವಚನ ಪಿತಾಮಹ ಶರಣ ಡಾ. ಫಕೀರಪ್ಪ ಹಳಕಟ್ಟಿಯವರು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಚಂದ್ರಪ್ಪ ಬಾರಂಗಿ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ, ತಾಲೂಕ ಶರಣ ಸಾಹಿತ್ಯ ಪರಿಷತ್ತು, ತಾಲೂಕಾ ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇಡೀ ಜಗತ್ತು ಒಂದೇ ಎನ್ನುವ ಭಾವನೆಯನ್ನು ಅತ್ಯಂತ ಸುಂದರ, ಸರಳ ಭಾಷೆಯಲ್ಲಿ ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು ಹಳಕಟ್ಟಿಯವರು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ಫ.ಗು. ಹಳಕಟ್ಟಿಯವರು ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ, ಹಸ್ತಪ್ರತಿಗಳ ಪರೀಕ್ಷಕರಾಗಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಎಲ್ಲೋ ಒಂದು ಹಸ್ತಪ್ರತಿ ಲಭ್ಯವಾದರೆ ಅದನ್ನು ಪರಿಶೀಲಿಸಿ, ಕ್ರಮಬದ್ಧವಾಗಿ ಸಂಪಾದನೆ ಮಾಡುತ್ತಿದ್ದರು ಮತ್ತು ಅದರ ಅನೇಕ ಪಾಠಾಂತರಗಳನ್ನು ಪರಿಶೀಲಿಸುತ್ತಿದ್ದರು ಎಂದರು.

ಸುರೇಶ ಅಂಗಡಿ ಸಾಂದರ್ಭಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಶೇಖರ ದಾನರೆಡ್ಡಿಯವರು ಪ್ರಾಚಾರ್ಯರಾದ ನಿಮಿತ್ತ ಚನ್ನಬಸಪ್ಪ ಕಂಠಿಯವರು ಸನ್ಮಾನಿಸಿದರು.

ಆರಂಭದಲ್ಲಿ ಶರಣ ವೀರನಗೌಡ ವಚನ ಸಂಗೀತ ಹಾಡಿದರೆ, ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ರತ್ನಕ್ಕ ಪಾಟೀಲ ಸ್ವಾಗತಿಸಿದರು. ಪ್ರೊ. ಶಿವಾನಂದ ಹೊಂಬಳ ಹಳಕಟ್ಟಿಯವರ ಕುರಿತಾಗಿರುವ ಹಾಡನ್ನು ಪ್ರಸ್ತುತಪಡಿಸಿದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷರಾದ ಸುಧಾ ಹುಚ್ಚಣ್ಣವರ ವಂದಿಸಿದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು. ವಚನ ಮಂಗಳವನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಕಾರ್ಯಕ್ರಮದಲ್ಲಿ ಶರಣರಾದ ಶೇಖಣ್ಣ ಕಳಸಾಪೂರಶೆಟ್ರ, ಶೇಖಣ್ಣ ಕವಳಿಕಾಯಿ, ರಾಚಪ್ಪ ಚವಡಿ, ಬಸವರಾಜ ಹಿರೇಹಡಗಲಿ, ಮಹಾಂತೇಶ ಅಂಗಡಿ, ಎಂ.ಬಿ. ಲಿಂಗದಾಳ, ಎಸ್.ಬಿ. ಸೋಮಗೊಂಡ, ಜಿ.ಆರ್. ಕದಂ, ಸಂಗಪ್ಪ ಪೂಜಾರ, ಭೋಸಲೆ, ಬಸವದಳದ ಅಧ್ಯಕ್ಷ ವ್ಹಿ.ಕೆ. ಕರೇಗೌಡ್ರ, ಎಸ್.ಎ. ಮುಗದ, ಪಿ.ಟಿ. ನಾರಾಯಣಪೂರ, ಪ್ರಾ. ಬಿ.ಬಿ. ಪಾಟೀಲ, ಪ್ರೇಮಾ ಮೇಟಿ, ಶರಣೆಯರಾದ ರೇಣುಕಾ ಹಾಸಲಕರ, ಪುಷ್ಪಾ ಭಂಡಾರಿ, ಲಕ್ಷ್ಮಿ ಅಂಗಡಿ, ಗಿರಿಜಾ ಅಂಗಡಿ, ನಿರ್ಮಲಾ ಪಾಟೀಲ, ಶಾಂತಾ ಮುಂದಿನಮನಿ, ಅನ್ನಪೂರ್ಣಾ ವರವಿ, ರೇಣುಕಾ ಕರೇಗೌಡ್ರ ಮುಂತಾದವರು ಉಪಸ್ಥಿತರಿದ್ದರು.

ದತ್ತಿ ದಾನಿಗಳಾದ ಸುರೇಶ ಅಂಗಡಿಯವರ ಸಹೋದರಿ ಜಯಶ್ರೀ ಪಟ್ಟಣಶೆಟ್ಟಿಯವರು ತಮ್ಮ ತಂದೆಯವರು ಬದುಕಿನಲ್ಲಿ ಸಾಧಿಸಿದ ಮತ್ತು ಕಷ್ಟದ ದಿನಗಳನ್ನು ನೆನೆಯುತ್ತಾ, ಇಂತಹ ಕಷ್ಟದಲ್ಲಿಯೂ ಅನೇಕ ಜನರಿಗೆ ಸಹಾಯ ಮಾಡುತ್ತಾ ಹಲವರಿಗೆ ಉದ್ಯೋಗವನ್ನು ನೀಡಿದ ಮಹಾನುಭಾವರು ಎಂದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!