ವಿಜಯಸಾಕ್ಷಿ ಸುದ್ದಿ, ಮುಳಗುಂದ : ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ಹುದ್ದೆಯಾಗಿದೆ ಎಂದು ಡಾ. ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದದ ಸಭಾ ಭವನದಲ್ಲಿ ಡಾ. ಐ.ಸಿ. ಪಾಟೀಲ್ ದಂಪತಿಗಳ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಡಾ. ಐ.ಸಿ. ಪಾಟೀಲ್ ಅವರು ಸುದೀರ್ಘ 42 ವರ್ಷಗಳ ಕಾಲ ಮುಳಗುಂದ ಪಟ್ಟಣದ ಜನರಿಗೆ ತಮ್ಮ ವೈದ್ಯ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದವರು. ಇಂತಹ ಮಹನೀಯರು ವೈದ್ಯ ವೃತ್ತಿಯ ಘನತೆಯನ್ನು ಹೆಚ್ಚಿಸಿ, ಬಡವರ ಏಳಿಗಾಗಿ ಹಗಲಿರುಳು ಶ್ರಮಿಸಿದವರು.
ಇಂತಹ ವೈದ್ಯರ ನಾಡಿನಲ್ಲಿ ಸಿಗುವುದು ಅಪರೂಪವಾಗಿದ್ದು, ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಸಮ್ಮುಖ ವಹಿಸಿ ಮಾತನಾಡಿ, ಸಮಾಜದ ಜನರಿಗಾಗಿ ತಮ್ಮ ವೈದ್ಯ ವೃತ್ತಿಯನ್ನು ಮುಡಿಪಾಗಿಟ್ಟು ಸೇವೆ ನೀಡಿದ ಡಾ. ಐ.ಸಿ. ಪಾಟೀಲ್ ವೈದ್ಯ ವೃತ್ತಿಯ ಘನತೆಯನ್ನು ಹೆಚ್ಚಿಸಿದ ಪುಣ್ಯಾತ್ಮರು ಎಂದರು.
ಡಾ. ಐ.ಸಿ. ಪಾಟೀಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈದ್ಯ ವೃತ್ತಿ ಸಿಗುವುದೇ ಒಂದು ಪುಣ್ಯ. ಇಷ್ಟು ವರ್ಷ ಮುಳಗುಂದ ಜನತೆ ನೀಡಿದ ಸಹಾರಕಾರದಿಂದ ಇಷ್ಟು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದ್ದು, ಮುಳಗುಂದ ಪಟ್ಟಣದ ಜನರನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಬಿ.ವಿ. ಸುಂಕಾಪೂರ, ಡಾ. ಎಸ್.ಸಿ. ಚವಡಿ, ಗೌರಮ್ಮ ಬಡ್ನಿ, ಗಿರಿಜಾ ಪಾಟೀಲ್, ಪಿ.ಎಸ್. ಮರಿದೇವರಮಠ, ಎಸ್.ಎಂ. ಉಜ್ಜಣ್ಣವರ, ಮಂಜುನಾಥ ಮಟ್ಟಿ, ವರ್ಷಾ ಬಾರಕೇರ, ವಿಜಯಲಕ್ಷಿö್ಮ ಹಿರೇಮಠ ಇದ್ದರು.