ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಲಬುರ್ಗಿಯವರ ಶ್ರೇಷ್ಠತೆ ಇರುವುದು ಕೇವಲ ಅವರು ಹಿರಿಯ ಸಂಶೋಧಕರಾಗಿದ್ದರು ಎಂಬುವುದಕ್ಕಲ್ಲ. ಅವರು ಸೃಜನಶೀಲ ಬರಹಗಾರರಾಗಿದ್ದರು ಎಂಬ ಕಾರಣಕ್ಕೂ ಅಲ್ಲ. ಅದಕ್ಕಿಂತ ಅವರಲ್ಲಿದ್ದ ಮಾನವೀಯ ಅಂತಃಕರಣ ಎಂಬುದು ಅವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಇಲ್ಲದಿದ್ದರೆ ನಮ್ಮ ಬದುಕು ಶೃತಿ ಕೆಟ್ಟ ಸಂಗೀತವಾಗುತ್ತದೆ ಎಂದು ಹೇಳುತ್ತಿದ್ದರು. ಸಂಗೀತ ಮತ್ತು ಅಧ್ಯಯನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಬರದಂತೆ ಎಚ್ಚರ ವಹಿಸಿದ ವ್ಯಕ್ತಿ ನಮ್ಮ ಕಲಬುರ್ಗಿಯವರು ಎಂದು ನಾಡೋಜ ಗೊ.ರು. ಚನ್ನಬಸಪ್ಪ ಹೇಳಿದರು.
ಅವರು ಗುರುವಾರ ಡಾ. ಎಂ.ಎಂ. ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ ೮೬ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಬುರ್ಗಿ ಅವರು ಯಾವುದೇ ಕೊರತೆ, ಹಸಿವು, ನಿದ್ದೆಗಳ ಹಂಗಿಲ್ಲದೆ ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ಲೋಕವ್ಯವಹಾರದಲ್ಲಿ ಸಮಗ್ರ ನೋಟ, ಸಮಗ್ರ ವರದಿ, ಸಮಗ್ರ ವ್ಯಕ್ತಿತ್ವ ಎಂಬ ಇಂತಹ ಪದಗಳನ್ನು ಬಳಸುತ್ತೇವೆ. ವ್ಯಕ್ತಿಗತವಾಗಿ ಅನ್ವಯಿಸುವುದಾದರೆ ಅದು ನಮ್ಮ ನೆಚ್ಚಿನ ಸಾಹಿತಿಗಳಾದ ಡಾ. ಎಂ.ಎಂ ಕಲಬುರ್ಗಿ ಅವರಿಗೆ ಅನ್ವಯಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ವೀರಣ್ಣ ರಾಜೂರ, ಉಮಾದೇವಿ ಎಂ.ಕಲಬುರ್ಗಿ ಉಪಸ್ಥಿತರಿದ್ದರು.
ಡಾ. ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಸದಸ್ಯ ಶಶಿಧರ ತೊಡಕರ ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಾ. ಈರಣ್ಣ ಇಂಜಗನೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಸದಸ್ಯ ಡಾ. ಬಾಳಣ್ಣ ಶೀಗಿಹಳ್ಳಿ ವಂದಿಸಿದರು.