ಡಾ. ಕಲಬುರ್ಗಿಯವರು ಪ್ರಶಸ್ತಿಗೆ ಬಾಗಿದವರಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು ಮತ್ತು ಎಂ.ಎ. ಕಲಬುರ್ಗಿ ಅವರ ಸಂಬಂಧ ಒಡಲೆರಡು, ಜೀವ ಒಂದು ಎನ್ನುವ ರೀತಿಯಲ್ಲಿತ್ತು ಎಂದು ಡಾ. ಎಂ.ಎ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.

Advertisement

ಶುಕ್ರವಾರ ತೋಂಟದಾರ್ಯ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಲಿಂ. ಸಿದ್ಧಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ–2025ರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುಸ್ತಕ ಪ್ರೇಮಿಗಳಾಗಿದ್ದ ಸಿದ್ಧಲಿಂಗ ಶ್ರೀಗಳ ಮನವೊಲಿಸಿ, ತೋಂಟದಾರ್ಯ ಮಠದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ಆರಂಭವಾಗಲು ಕಲಬುರ್ಗಿ ಅವರೇ ಕಾರಣರು. ಇಂದು ಆ ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ವಿಶ್ವವಿದ್ಯಾಲಯವೊಂದರ ಪ್ರಸಾರಾಂಗಕ್ಕಿಂತ ಹೆಚ್ಚು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದೆ ಎಂದರು.

ಎಂ.ಎ. ಕಲಬುರ್ಗಿ ಅವರು ಯಾವುದೇ ಪ್ರಶಸ್ತಿಗೆ ಬೀಗಲಿಲ್ಲ, ಬಾಗಿದವರೂ ಅಲ್ಲ. ಬಂದ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸಿ, ಪ್ರಶಸ್ತಿಯ ಮೊತ್ತವನ್ನು ಸಮಾಜಕ್ಕೆ ಅರ್ಪಿಸಿದವರು. ಕಲಬುರ್ಗಿ ಅವರಿಗೆ ಸಾಹಿತ್ಯ ಅಕಾಡೆಮಿಯ 6 ಪ್ರಶಸ್ತಿಗಳು ಒಳಗೊಂಡು ಒಟ್ಟು 32 ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಈಗ ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರು ಒಟ್ಟಾಗಿ ನೀಡುತ್ತಿರುವ ಈ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 33ನೇಯದ್ದಾಗಿದ್ದು, ಅತ್ಯಂತ ಮಹತ್ವಪೂರ್ಣ ಪ್ರಶಸ್ತಿಯಾಗಿದೆ ಎಂದರು.

ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಆಳಂದದ ಕೋರಣೇಶ್ವರ ಸ್ವಾಮೀಜಿ, ಅರಸಿಕೆರೆಯ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ಶಿವಪ್ರಸಾದ ದೇವರು, ಚಂದ್ರಶೇಖರ ದೇವರು, ಶಿವರುದ್ರಯ್ಯ ಸ್ವಾಮೀಜಿ ಬಾದಾಮಿ, ಬೇಲೂರಿನ ಶಂಕರಾನಂದ ಸ್ವಾಮೀಜಿ, ರೇವಣಸಿದ್ದೇಶ್ವರ ಶಿವಾಚಾರ್ಯರು, ಕೆಂಚಬಸವ ಶಿವಾಚಾರ್ಯರು ಕಲಬುರ್ಗಿ, ಗಂಗಾಧರ ಸ್ವಾಮೀಜಿ ಯಶವಂತನಗರ, ಮಹಾಂತ ದೇವರು ಬೇಲೂರ (ಹಾಸನ), ಶಾಂತವೀರೇಶ್ವರ ಸ್ವಾಮೀಜಿ, ವೆಂಕಟಾಪುರ ಶರಣರು ಸಮ್ಮುಖ ವಹಿಸಿದ್ದರು.

ಸಮಾರಂಭದಲ್ಲಿ ಯಾಕೂಬ್ ಮಸೀಹ್ ಬರೆದ ಹಿಂದಿ ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ತೋಂಟದ ಸಿದ್ಧರಾಮ ಶ್ರೀಗಳ `ತೌಲನಿಕ ಧರ್ಮದರ್ಶನ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹಂಪಿ ಕನ್ನಡ ವಿ.ವಿ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಮಲ್ಲಿಕಾರ್ಜುನ ಅಕ್ಕಿ, ಎಸ್.ಎಸ್. ಪಟ್ಟಣಶೆಟ್ಟರ್, ಕೊಟ್ರೇಶ ಮೆಣಸಿನಕಾಯಿ, ಬಾಲಚಂದ್ರ ಭರಮಗೌಡ್ರ ಉಪಸ್ಥಿತರಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ–2025ನ್ನು ಮರಣೋತ್ತರವಾಗಿ ಎಂ.ಎ. ಕಲಬುರ್ಗಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 5 ಲಕ್ಷ ರೂ. ನಗದು, ಸ್ಮರಣಿಗೆ ಒಳಗೊಂಡಿದ್ದು, ಪ್ರಶಸ್ತಿಯನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಸ್ವೀಕರಿಸಿದರಲ್ಲದೆ, ಪ್ರಶಸ್ತಿ ಮೊತ್ತವನ್ನು ಶ್ರೀಮಠದ ನೌಕರರ ಮಕ್ಕಳ ಕಲ್ಯಾಣಕ್ಕೆ ಮರಳಿ ನೀಡಿದರು.
“ಡಾ. ಎಂ.ಎ. ಕಲಬುರ್ಗಿ ಸಾವಿಲ್ಲದ ಗುರುಗಳು. ಅವರು ಬದುಕಿದ್ದರೆ ಪ್ರಸ್ತುತ ರಾಜಕೀಯ, ಸಾಮಾಜಿಕ ಗೊಂದಲಗಳನ್ನು ಕಟುವಾಗಿ ಟೀಕಿಸುವ ಜೊತೆಗೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿದ್ದರು. ಅಂಥ ಗುರುಗಳಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ತಂದಿದೆ”
ಮಲ್ಲಿಕಾ ಘಂಟಿ,
ವಿಶ್ರಾಂತ ಕುಲಪತಿಗಳು.

“ಕಲಬುರ್ಗಿ ಅವರು ಬಸವತತ್ವ ಬೆಳೆಯಬೇಕು ಎನ್ನುವ ಗಟ್ಟಿ ಧ್ವನಿಯಾಗಿದ್ದರು. ಲಿಂಗಾಯತ ಧರ್ಮದ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ಅವರ ಚಿಂತನೆಗಳನ್ನು ತೋಂಟದಾರ್ಯ ಮಠ ಕಾರ್ಯರೂಪಕ್ಕೆ ತಂದಿದೆ. ಹೀಗಾಗಿ ಕಲಬುರ್ಗಿಯವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು”
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ.

 


Spread the love

LEAVE A REPLY

Please enter your comment!
Please enter your name here