ಬೆಂಗಳೂರು: ಡಾ. ರಾಜ್‌ಕುಮಾರ್ ಸಮಾಧಿ ವಿಚಾರವಾಗಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಗಾಗಲೇ ಚೇತನ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆ ಯಲ್ಲಿ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಸಾ.ರಾ. ಗೋವಿಂದು ಕೂಡ ಚೇತನ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಅದನ್ನೂ ದಾಖಲಿಸಿಕೊಂಡಿದ್ದಾರೆ.
ಎರಡೂ ಪಕ್ಷಗಳಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಹೇಳಿಕೆ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ.
ವಿವಾದದ ಹಿನ್ನೆಲೆ:
ಏಪ್ರಿಲ್ 24ರಂದು ಡಾ. ರಾಜ್‌ಕುಮಾರ್ ಜನ್ಮದಿನದಂದು, ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣದಲ್ಲಿ ಸಮಾಧಿಗೆ ನೀಡಿರುವ 2.5 ಎಕರೆ ಭೂಮಿ ಕುರಿತು ಪ್ರಶ್ನೆ ಎತ್ತಿದ್ದರು. “ಸಾರ್ವಜನಿಕ ಭೂಮಿಯನ್ನು ಜನರ ಉಪಯೋಗಕ್ಕೆ ಬಳಸಬೇಕು, ಮತಗಳ ಲಾಭಕ್ಕಾಗಿ ಹಂಚಬಾರದು” ಎಂದು ಅವರು ಪೋಸ್ಟ್ ಮಾಡಿದ್ದರು. ಈ ಹೇಳಿಕೆಗೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆ, ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾ.ರಾ. ಗೋವಿಂದು, ಜಯಮಾಲ ಮತ್ತು ಸುಂದರ್ ರಾಜ್ ಸೇರಿದಂತೆ ಹಲವರು ಚೇತನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೆಲ ಅಭಿಮಾನಿಗಳು ಚೇತನ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಬೆಳವಣಿಗೆಗಳ ಬಳಿಕ, ಚೇತನ್ ಅಹಿಂಸಾ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದರು. ತಮ್ಮ ಉದ್ದೇಶ ಯಾರನ್ನೂ ನೋಯಿಸುವುದಲ್ಲ ಎಂದು ಸ್ಪಷ್ಟಪಡಿಸಿ, ತಾನೂ ಡಾ. ರಾಜ್‌ಕುಮಾರ್ ಅಭಿಮಾನಿ ಎಂದು ತಿಳಿಸಿದ್ದಾರೆ.



