ಕುಡಿಯುವ ನೀರಿನ ಹಾಹಾಕಾರ; ನಗರಸಭೆಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು-ತಡೆದ ಪೊಲೀಸರು!

0
Spread the love

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಿದ್ದನ್ನು ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರಸಭೆ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಗರಸಭೆಯೊಳಗೆ ನುಗ್ಗಲು ಮುಂದಾದರು. ಆದರೆ ಕಾರ್ಯಕರ್ತರ ಯತ್ನವನ್ನು ಪೊಲೀಸರು ತಡೆದು ನಗರಸಭೆಯೊಳಗೆ ಬಿಡದೇ ಗೇಟ್ ಮುಂಬಾಗದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರು. ಇನ್ನೂ ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ಹಲವು ಬಾರಿ ಸಮಸ್ಯೆ ಬಗ್ಗೆ ನಿಮ್ಮ ಗಮನಕ್ಕೆ ತರಲಾಗಿದೆ. ನಗರಸಭೆ ಸದಸ್ಯರಿಗೂ ನೀವು ಗೌರವ ಕೊಟ್ಟಿಲ್ಲ, ನೀವು ನಗರಸಭೆ ಆಡಳಿತ ಅಧಿಕಾರಿಯಾಗಿದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿದ್ದೀರಿ ಎಂದು ಕಿಡಿಕಾರಿದರು.

ಅದಲ್ಲದೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಡಿಸಿ ಅವರು ಕೈ ಮುಗಿದು ಪ್ರತಿಭಟನಾಕಾರರ ಮನವೊಲಿಸಿ ಎಮ್‌ಎಲ್‌ಸಿ ಎಸ್ ವಿ ಸಂಕನೂರು ನೇತೃತ್ವದಲ್ಲಿ ಕೆಲ ಮುಖಂಡರೊಂದಿಗೆ ಗುಪ್ತ ಸಭೆ ನಡೆಸಿ ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ಮಹೇಶ ದಾಸರ್, ಸದಸ್ಯರಾದ ಚಂದ್ರು ತಡಸದ, ಮಹಾಂತೇಶ್ ನಲವಡಿ, ಅನಿಲ ಅಬ್ಬಿಗೇರಿ, ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ನವೆಂಬರ್‌ದೊಳಗೆ ಸಮಸ್ಯೆಗೆ ಮುಕ್ತಿ- ಡಿಸಿ ಭರವಸೆ

ನಗರಸಭೆಯಲ್ಲಿ ನಡೆದ ಗುಪ್ತ ಸಭೆಯಲ್ಲಿ ನವೆಂಬರ್ ವರೆಗೆ ಸಮಸ್ಯೆ ಬಗೆಹರಿಸೋದಾಗಿ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಡಿಸಿ ಸಿ ಎನ್ ಶ್ರೀಧರ್ ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾಹಿತಿ ನೀಡಿದ್ದಾರೆ.

46 ಕಿಲೋ ಮೀಟರ್ ಉದ್ದ ಇರುವ ಪೈಪ್ ಲೈನ್ ಅಲ್ಲಲ್ಲಿ ಸೋರಿಕೆ ಆಗುತ್ತಿದ್ದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ನವೆಂಬರ್ ವರೆಗೆ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೋರ್ ವೆಲ್ ನೀರು ಪೂರೈಕೆ ಆಗಲಿದೆ.

760 ಬೋರ್ ವೆಲ್ ಪೈಕಿ ದುರಸ್ಥಿಯಲ್ಲಿರುವ 56 ಬೋರ್ ವೆಲ್ ರಿಪೇರಿಗೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ್ದು, ಹುಲಕೋಟಿಗೆ ಪೂರೈಕೆಯಾಗುವಂತೆ ಗದಗ- ಬೆಟಗೇರಿಗೂ ಅದೇ ರೀತಿ ನೀರು ಪೂರೈಕೆಯಾಗಲಿ ಎಂದು ಪರಿಷತ್ ಸದಸ್ಯ ಎಸ್ ವಿ ಸಂಕನೂರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here