ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ–ಹೊಸೂರು ಬಳಿ ನಡೆದಿದೆ.
ಮೃತರನ್ನು ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ಗ್ರಾಮದ ನಿವಾಸಿಗಳಾದ ನವೀನ್ (21) ಮತ್ತು ರಾಮಚಂದ್ರ (37) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರುದ್ರೇಶ್ (26) ಮತ್ತು ಮಂಜುನಾಥ್ (21) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮಚಂದ್ರ ಕಾರು ಚಾಲನೆ ಮಾಡುತ್ತಿದ್ದರು.
ಇಂದು ಬೆಳಗಿನ ಜಾವ ಶಿಕಾರಿಪುರದ ಪುನೇದಹಳ್ಳಿಯಿಂದ ಆನವಟ್ಟಿ ಕಡೆಗೆ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



