ದರ್ಬಾರ್ ಯಶಸ್ಸಿಗೆ ಸಹಕಾರ ನೀಡುವೆ : ಜಿ.ಎಸ್. ಪಾಟೀಲ

0
Dussehra Durbar pre-meeting
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಬರುವ ಅಕ್ಟೋಬರ್ 3ರಿಂದ 12ರವರೆಗೆ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆಯಲಿರುವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಕಾರ್ಯಕ್ರಮ ಯಶಸ್ವಿಯಾಗಲು ಸಕಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ರೋಣ ಶಾಸಕ, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

Advertisement

ಅಬ್ಬಿಗೇರಿಯ ಹಿರೇಮಠದಲ್ಲಿ ಶನಿವಾರ ನಡೆದ ದಸರಾ ದರ್ಬಾರ್ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ 2005ರಲ್ಲಿ ಇಲ್ಲಿನ ಜನತೆ ಶ್ರೀಶೈಲ ಜಗದ್ಗುರುಗಳ ಶರನ್ನವರಾತ್ರಿ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅದರ ಅನುಭವದ ಮೇಲೆ ಈಗ ಈ ದೊಡ್ಡ ಕಾರ್ಯಕ್ರಮಕ್ಕೆ ಕೈ ಹಾಕಿದ್ದು, ಇದೂ ಕೂಡ ಯಶಸ್ವಿಯಾಗಲಿದೆ ಎಂದು ಶಾಸಕ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಈಬಗ್ಗೆ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು, ಅವರಿಂದ ಸಿಗುವ ಸಹಾಯ-ಸಹಕಾರದ ಬಗ್ಗೆ ಚರ್ಚಿಸಿ, ಸಮಾರಂಭಕ್ಕೆ ಅವಶ್ಯಕವಿರುವ ಸಮಿತಿಗಳನ್ನು ತಯಾರು ಮಾಡಲು ಸಲಹೆ ಮಾಡಿದರು.

ಲಿಂ. ಸೋಮಶೇಖರ ಶಿವಾಚಾರ್ಯರ ಆಶೀರ್ವಾದದಿಂದ ಈ ಕಾರ್ಯ ಅತ್ಯಂತ ಸರಳವಾಗಿ ಜರುಗುತ್ತದೆ. ಇದು ಕೇವಲ ಅಬ್ಬಿಗೇರಿ ಗ್ರಾಮದ ಸಮಾರಂಭವಲ್ಲ. ಇಡೀ ಗದಗ ಜಿಲ್ಲೆಯ ಸಮಾರಂಭವೆಂದು ಜಿಲ್ಲೆಯ ಎಲ್ಲ ಜನರೂ ಭಾವಿಸಿ, ತನು-ಮನ-ಧನಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಬೇಕು. ಎಲ್ಲ ಕಾರ್ಯಗಳಲ್ಲಿ ಎಲ್ಲ ಭಕ್ತಾದಿಗಳೂ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕೆಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಂದಪ್ಪ ವೀರಾಪೂರ, ಶರನ್ನವರಾತ್ರಿ ಉತ್ಸವದ ಅಂದಾಜು ವೆಚ್ಚವನ್ನು ಸಭೆಯ ಮುಂದಿರಿಸಿ, ಈ ಕಾರ್ಯಕ್ಕೆ ಈಗಾಗಲೇ ದೇಣಿಗೆ ನೀಡಿದವರ, ವಾಗ್ದಾನ ಮಾಡಿದವರ ಹೆಸರುಗಳನ್ನು ಸಭೆಗೆ ತಿಳಿಸಿದರು. ಸಭೆಯನ್ನುದ್ದೇಶಿಸಿ ಡಾ. ಕೆ.ಬಿ. ಧನ್ನೂರ, ಸಿದ್ದಣ್ಣ ಬಂಡಿ, ಗ್ರಾ.ಪಂ ಸದಸ್ಯ ಸಿದ್ದಪ್ಪ ಹರದಾರಿ ಮುಂತಾದವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಚಳಗೇರಿಯ ವೀರಸಂಗಮೇಶ್ವರ ಶ್ರೀಗಳು, ಅಬ್ಬಿಗೇರಿಯ ಶ್ರೀ ಬಸವರಾಜ ಶ್ರೀಗಳು ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆ ಐ.ಎಸ್. ಪಾಟೀಲ, ಪರಶುರಾಮಪ್ಪ ಅಳಗವಾಡಿ, ಗ್ರಾ.ಪಂ ಅಧ್ಯಕ್ಷ ದ್ವಾಸಲ್, ಅನೇಕ ಹರ-ಗುರು-ಚರ ಮೂರ್ತಿಗಳು, ಗಣ್ಯರು ಉಪಸ್ಥಿತರಿದ್ದರು. ಬಸವರಾಜ ಪಲ್ಲೇದ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಗುಗ್ಗರಿ ನಿರೂಪಿಸಿದರು.

ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಅಬ್ಬಿಗೇರಿಯಲ್ಲಿ ನಡೆಯಲಿರುವ ದಸರಾ ದರ್ಬಾರ್ ಅತ್ಯಂತ ವಿಶೇಷವಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಕಾರ್ಯಗಳನ್ನು ತರಾತುರಿಯಲ್ಲಿ ನಡೆಸಬೇಕಿದೆ. ಉತ್ಸವದ ಆಚರಣೆಯೊಂದಿಗೆ ಧರ್ಮ ಜಾಗೃತಿಯ ಕಡೆಗೆ ಎಲ್ಲರೂ ಗಮನ ಹರಿಸಬೇಕಿರುವುದು ಅವಶ್ಯಕವಾಗಿದೆ ಎಂದರು.

 


Spread the love

LEAVE A REPLY

Please enter your comment!
Please enter your name here