ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮುಂಜೂರಾತಿಗೆ ಜುಲೈ 1 ರಿಂದ ಇ-ಖಾತಾ ಸಲ್ಲಿಕೆ ಕಡ್ಡಾಯ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಆದೇಶ ಹೊರಡಿಸಿದ್ದಾರೆ. 01-07-2025 ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್ಲೈನ್ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ.
ಯಾವುದೇ ಆಸ್ತಿಯನ್ನು ಕೊಳ್ಳುವವರು ಇ- ಖಾತೆ ಕಡ್ಡಾಯವಾಗಿ ಮಾಡಿಸಬೇಕಿದೆ. ಮಾರಾಟವಾಗುವ ಪ್ರತಿಯೊಂದು ಆಸ್ತಿಗೂ ನೋಂದಾವಣಿ ಸಂದರ್ಭದಲ್ಲಿ ಇ- ಖಾತೆ ಮಾಡಿಸಬೇಕಿದ್ದು, ಪ್ರತಿಯೊಂದು ಇ-ಖಾತೆಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಆ ಸಂಖ್ಯೆಯನ್ನು ಈಗ ನೋಂದಾವಣಿಯಾಗುತ್ತಿರುವ ಕಾವೇರಿ – 2 ಸಾಫ್ಟ್ ವೇರ್ ಅಡಿಯಲ್ಲೇ ನೀಡಲಾಗುತ್ತದೆ. ಎಲ್ಲಾ ಬಿಡಿಎ, ಎ ಖಾತೆ, ಬಿ ಖಾತ ಸೇರಿದಂತೆ ಎಲ್ಲಾ ರೀತಿಯ ಖಾತೆಗಳಿಗೆ ಇ- ಖಾತೆ ಇನ್ನು ಕಡ್ಡಾಯವಾಗಲಿದೆ. ಇದರ ಜೊತೆಗೆ, ಈವರೆಗೆ ನೀಡಲಾಗುತ್ತಿದ್ದ ಪೇಪರ್ ಖಾತೆಗಳು ಇನ್ನು ಮುಂದೆ ರದ್ದಾಗಲಿವೆ. ಹೀಗಾಗಿ ಇನ್ಮುಂದೆ ಆನ್ ಲೈನ್ ನಂಬಿಕೆನಕ್ಷೆ ಸೇರಿ ಎಲ್ಲಾ ಅರ್ಜಿಗೆ ಇ-ಖಾತಾ ಕಡ್ಡಾಯವಾಗಲಿದೆ.