ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ. 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ಇಬ್ಬರ ಒಟ್ಟು 11.14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.
ಆನ್‌ಲೈನ್ ಬೆಟ್ಟಿಂಗ್ ಸೈಟ್ 1xBet ವಿರುದ್ಧದ ಪ್ರಕರಣದಲ್ಲಿ ಧವನ್ಗೆ ಸೇರಿದ 4.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳು ಮತ್ತು ರೈನಾ ಅವರ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಿದೆ. ಈ ಇಬ್ಬರು 1xBet ಪ್ರಚಾರ ಮಾಡಲು ವಿದೇಶಿ ಸಂಸ್ಥೆಗಳೊಂದಿಗೆ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿದ್ದಾಗಿ ಇ.ಡಿ. ತನಿಖೆಯಿಂದ ಗೊತ್ತಾಗಿದೆ.
ಈ ಪ್ರಕರಣದ ತನಿಖೆಯ ಭಾಗವಾಗಿ, ಇ.ಡಿ. ತನಿಖಾಧಿಕಾರಿಗಳು ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್, ಊರ್ವಶಿ ರೌಟೇಲಾ, ಮಿಮಿ ಚಕ್ರವರ್ತಿ ಮತ್ತು ಅನುಷ್ಕಾ ಹಜ್ರಾ ಅವರನ್ನೂ ಸಹ ವಿಚಾರಣೆ ನಡೆಸಿದ್ದರು. ಬೆಟ್ಟಿಂಗ್ ಆ್ಯಪ್ ಬಳಕೆದಾರರನ್ನು ವಂಚಿಸಿದ್ದು ಮಾತ್ರವಲ್ಲದೆ ಗಣನಿಯವಾಗಿ ತೆರಿಗೆಗಳನ್ನು ತಪ್ಪಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ವಿರುದ್ಧದ ಕ್ರಮದ ಭಾಗವಾಗಿ ಈ ತನಿಖೆ ನಡೆದಿದೆ. ವಂಚನೆಯ ಯೋಜನೆಗಳನ್ನು ನಡೆಸುತ್ತಿರುವ ಮತ್ತು ದೊಡ್ಡ ಪ್ರಮಾಣದ ಹಣವನ್ನು ಅಕ್ರಮವಾಗಿ ಸಾಗಿಸುತ್ತಿರುವ ಆರೋಪದ ಮೇಲೆ ಇ.ಡಿ. ತನಿಖೆ ನಡೆಸುತ್ತಿದೆ.



