ನವದೆಹಲಿ: ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ಇಡಿ) ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ಗೆ ಸೇರಿದ ₹3,084 ಕೋಟಿ ಮೌಲ್ಯದ 40 ಆಸ್ತಿಗಳನ್ನು ಜಪ್ತಿ ಮಾಡಿದೆ. ಮುಂಬೈ, ಪುಣೆ, ದೆಹಲಿ ಸೇರಿದಂತೆ ಹಲವೆಡೆ ಇರುವ ಈ ಆಸ್ತಿಗಳನ್ನು, ಬ್ಯಾಂಕ್‌ನಿಂದ ಪಡೆದ ಹೂಡಿಕೆ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.
ಬೇರೆ ಬೇರೆ ನಗರಗಳಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ವಸತಿ , ಕಚೇರಿ ಕಟ್ಟಡಗಳಿವೆ. ಜೊತೆಗೆ ಆಂಧ್ರದಲ್ಲಿ ಭೂಮಿ ಕೂಡ ಇದೆ. ಆಕ್ರಮ ಹಣ ವರ್ಗಾವಣೆಯ ಕೇಸ್ ನ ತನಿಖೆ ಭಾಗವಾಗಿ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಗಳ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿ ಈ ಆಸ್ತಿಪಾಸ್ತಿ ಖರೀದಿಸಲಾಗಿದೆ ಎಂದು ಇ.ಡಿ. ಹೇಳಿದೆ.
2017-19ರ ಅವಧಿಯಲ್ಲಿ ಯೆಸ್ ಬ್ಯಾಂಕ್, 2,965 ಕೋಟಿ ರೂಪಾಯಿ ಹಣವನ್ನು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿತ್ತು. ಇನ್ನೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಯೆಸ್ ಬ್ಯಾಂಕ್, 2045 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿತ್ತು.
ಆದರೇ, ಈ ಹೂಡಿಗಳು ಅನುತ್ಪಾದಕ ಆಸ್ತಿಗಳಾಗಿದ್ದವು. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ , ಯೆಸ್ ಬ್ಯಾಂಕ್ ಗೆ 1,353 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವುದು ಬಾಕಿ ಇದೆ. ಇನ್ನೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ಯೆಸ್ ಬ್ಯಾಂಕ್ ಗೆ 1,984 ಕೋಟಿ ರೂಪಾಯಿ ಮರುಪಾವತಿ ಮಾಡುವುದು ಬಾಕಿ ಇದೆ.


