ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣ, ಪ್ರೋತ್ಸಾಹಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಪ್ರೌಢ ವಿಭಾಗದ ಬಿ.ಆರ್.ಪಿ ಹಾಗೂ ಕ.ಸಾ.ಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಅಭಿಪ್ರಾಯಪಟ್ಟರು.
ಅವರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಾಪುರದಲ್ಲಿ ಜರುಗಿದ ದೊಡ್ಡೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಗುವಿನೊಳಗಿನ ಕಲೆ/ಕಲಾವಿದನನ್ನು ಹೊರ ತರುವುದು ಪ್ರತಿಭಾ ಕಾರಂಜಿಯ ಪ್ರಮುಖ ಉದ್ದೇಶ. ನಾಲ್ಕು ಗೋಡೆಯ ಒಳಗಿನ ಕಲಿಕೆಯೊಂದೇ ಶಿಕ್ಷಣವಲ್ಲ. ಬದಲಾಗಿ ಹೊರಗಿನ ಪರಿಸರದಲ್ಲಿ ಮಗುವಿನ ಅನುಭವಗಳನ್ನು ಕಲಿಕೆಯಾಗಿ ದೃಢಗೊಳಿಸಿ ಹೊರ ಜಗತ್ತಿಗೆ ಪರಿಚಯಿಸುವುದು ಇಂದಿನ ಆದ್ಯತೆ ಆಗಬೇಕು ಎಂದರು.
ಮುಖ್ಯೋಪಾಧ್ಯಾಯ ಎಫ್.ಎನ್. ಗೋಣೆಪ್ಪನವರ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಸಿ.ಆರ್.ಪಿ ಶಿವಾನಂದ ಅಸುಂಡಿ ಮಾತನಾಡಿ, ಯಲ್ಲಾಪುರ ಗ್ರಾಮವು ಶಿಕ್ಷಣ, ಸಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಮಾದರಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಮಲ್ಲಣ್ಣವರ, ದೇವೇಂದ್ರಪ್ಪ ಮತ್ತೂರ, ತಿರುಪತೆಪ್ಪ ಅಕ್ಕೂರ, ಆರ್.ಬಿ. ಜೋಶಿ, ಎಂ.ಎಸ್. ಹಿರೇಮಠ, ಡಿ.ಡಿ. ಲಮಾಣಿ, ಗಿರೀಶ ನೇಕಾರ, ಚಂದ್ರಶೇಖರ ವಡಕಣ್ಣವರ, ಎಸ್.ಎಚ್. ಉಮಚಗಿ, ಎಸ್.ಎಂ. ಸ್ಥಾವರಮಠ, ಎಂ.ಐ. ಕಣಕೆ, ಎಸ್.ಎಂ. ಹುಡೇದ ಸೇರಿ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.



