ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಳೆದ ಹಲವು ವರ್ಷದಿಂದ ನಷ್ಟದಲ್ಲಿಯೇ ಸಾಗುತ್ತಿರುವ ಸಂಘವನ್ನು ಲಾಭದತ್ತ ತರಲು ಪ್ರಯತ್ನಿಸಲಾಗುತ್ತಿದ್ದು, ಸಂಘದ ನಿರ್ದೇಶಕ ಮಂಡಳಿ ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಂ3ರ ಅಧ್ಯಕ್ಷ ಕಳಕಪ್ಪ ಟೆಂಗಿನಕಾಯಿ ವಿನಂತಿಸಿಕೊಂಡರು.
ಸಂಘದ 85ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರುವ ವರ್ಷದಲ್ಲಿ ನಷ್ಟವನ್ನು ಮೀರಿ ಲಾಭದತ್ತ ತರುವ ಪ್ರಯತ್ನ ಮಾಡಲಾಗುವುದು. ಈ ದಿಸೆಯಲ್ಲಿ ಬೆಳೆಸಾಲ ಪಡೆದ ರೈತರು ಮತ್ತು ವ್ಯಾಪಾರ ಸಾಲಗಾರರು ಹಲವು ವರ್ಷಗಳಿಂದ ಕಟ್‌ಬಾಕಿದಾರರಾಗಿದ್ದಾರೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದ್ದು, ಸಂಘದ ಅಭಿವೃದ್ಧಿ ದೃಷ್ಟಿಯಿಂದ ಕಟ್ ಬಾಕಿದಾರ ಸಾಲಗಾರರ ಮನವೊಲಿಸಿ ವಸೂಲಿ ಮಾಡುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಘದ ಸರ್ವ ಸದಸ್ಯರ ಸಹಕಾರ ಪ್ರಾಮುಖ್ಯವಾಗಿದೆ ಎಂದರು.
ಕೆ.ಸಿ.ಸಿ ಬ್ಯಾಂಕಿಗೆ ನೀಡಿರುವ ಕಟ್ಟಡದ ಬಾಡಿಗೆ ಮೊತ್ತವನ್ನು ಹೆಚ್ಚಿಸುವುದು, ಸರಕಾರದ ಬೆಂಬಲ ಬೆಲೆಯ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಮತ್ತು ರಿಯಾಯಿತಿ ದರದ ಬೀಜ, ಗೊಬ್ಬರ, ಕ್ರಿಮಿನಾಶಕ ಮಾರಾಟ ಕೇಂದ್ರವನ್ನು ತೆರೆದು ಲಾಭದತ್ತ ಸಂಘವನ್ನು ಕೊಂಡ್ಯೂಯುವ ಪ್ರಯತ್ನ ಮಾಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಅಂಕಲೆಪ್ಪ ಬಾಳಿಕಟ್ಟಿ, ನಿರ್ದೇಶಕರಾದ ರಾಚಪ್ಪ ನಾಲ್ವಾಡದ, ಮಲ್ಲಪ್ಪ ಸೊರಟೂರು, ಅಪ್ಪಣ್ಣ ನ್ಯಾವಳ್ಳಿ, ಚಂದ್ರಶೇಖರಪ್ಪ ಮೂಡಲತೋಟ, ಪಾಲಾಕ್ಷಪ್ಪ ಅರಹುಣಶಿ, ಬಸವರಾಜ ಬಾರಿಕಾಯಿ, ಬಸವ್ವ ಬೆಟಗೇರಿ, ಯಲ್ಲಪ್ಪ ಪೂಜಾರ, ಬಸವರಾಜ ಹುಬ್ಬಳ್ಳಿ ಉಪಸ್ಥಿತರಿದ್ದರು. ಷಣ್ಮುಖಪ್ಪ ಮದ್ನೂರು ಸ್ವಾಗತಿಸಿದರು, ಪ್ರವೀಣ ಕಲಾಲ ವಂದಿಸಿದರು.