ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಪಜಿರಡ್ಕ ಸಮೀಪ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ. ಅವರು ಉಜಿರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು.
ಮಂಗಳವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಶ್ರೀಪೂರ್ಣ ಸೇರಿದಂತೆ ಏಳು ಮಂದಿ ಸ್ನೇಹಿತರ ತಂಡ ನೇತ್ರಾವತಿ ನದಿಗೆ ಈಜಲು ತೆರಳಿತ್ತು. ಈ ವೇಳೆ ಶ್ರೀಪೂರ್ಣ ನೀರಿನಲ್ಲಿ ಮುಳುಗಿದರೆಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಪಡೆ ಶೋಧ ಕಾರ್ಯ ಆರಂಭಿಸಿದೆ. ವಿದ್ಯಾರ್ಥಿಯ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



